ಗುಡ್ಡೆಹೊಸೂರು ಏ.3 : ಉರಿ ಬಿಸಿಲ ಬೇಸಿಗೆಯಲ್ಲಿ ಜಾನುವಾರು ಸಾಕಾಣೆಗಾರರು ಮೇವಿನ ಕೊರತೆಯನ್ನು ಎದುರಿಸುವುದು ಸಾಮಾನ್ಯವಾಗಿರುವ ಹಿನ್ನೆಲೆ, ಮೇವಾಗಿ ಬಳಸಲ್ಪಡುವ ಭತ್ತದ ಹುಲ್ಲನ್ನು ಯಾವುದೇ ಕಾರಣಕ್ಕೂ ಶುಂಠಿ ಕೃಷಿಯಲ್ಲಿ ಬಳಕೆ ಮಾಡದಿರುವುದು ಒಳ್ಳೆಯದು.
ಶುಂಠಿ ಕೃಷಿಯಲ್ಲಿ ನಾಟಿ ಮಾಡಿದ ಬಳಿಕ, ಶುಂಠಿ ಬೀಜ ಮೊಳಕೆಯೊಡೆಯುವುದಕ್ಕೆ ಪೂರಕವಾಗಿ, ಅದರ ಮೇಲೆ ಬಿಸಿಲು ಬೀಳದಂತೆ ಭತ್ತದ ಹುಲ್ಲನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ರೀತಿ ಶುಂಠಿ ಕೃಷಿಯಲ್ಲಿ ಬಳಸುವ ಹುಲ್ಲನ್ನು ಮತ್ತೆ ಮೇವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಒಂದಷ್ಟು ಸಮಯದ ಬಳಿಕ ಆ ಹುಲ್ಲು ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ.
ಜಿಲ್ಲೆಯಾದ್ಯಂತ ರೈತ ಕುಟುಂಬಗಳು ಗೋಸಾಕಾಣೆಯನ್ನು ಬದುಕಿನ ಭಾಗವಾಗಿ ಇಂದಿಗೂ ಪರಿಗಣಿಸಿದ್ದರೆ, ಜಿಲ್ಲೆಯ ಕೆಲವೆಡೆಗಳಲ್ಲಿರುವ ಗೋಶಾಲೆಗಳವರು ತಮ್ಮಲ್ಲಿರುವ ರಾಸುಗಳಿಗೆ ಅಗತ್ಯ ಮೇವಿಗಾಗಿ ದಿನನಿತ್ಯ ಪರದಾಡುವ ಪರಿಸ್ಥಿತಿಗಳಿವೆ. ಇಂತಹ ಪರಿಸ್ಥಿತಿಗಳನ್ನು ಅರಿತು ಭತ್ತದ ಬೆಳೆಗಾರರು ತಮ್ಮಲ್ಲಿನ ಭತ್ತದ ಹುಲ್ಲನ್ನು ಗೋಶಾಲೆಗಳಿಗೆ ಇಲ್ಲವೇ ಅಗತ್ಯವಿರುವ ರೈತರಿಗೆ ಒದಗಿಸುವ ಚಿಂತನೆ ನಡೆಸುವುದು ಅವಶ್ಯ.
ಪ್ರಸ್ತುತ ಜಿಲ್ಲೆಯ ಹಲವಡಡೆಗಳಲ್ಲಿನ ಶುಂಠಿ ಕೃಷಿಯಲ್ಲಿ ಭತ್ತದ ಹುಲ್ಲನ್ನು ಬಳಸಲಾಗುತ್ತಿದೆ. ಭತ್ತದ ಹುಲ್ಲಿನ ಬಳಕೆಗೆ ಬದಲಾಗಿ ಜೋಳದ ಕಡ್ಡಿಗಳನ್ನು ಪರ್ಯಾಯವಾಗಿ ಬಳಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಶುಂಠಿ ಕೃಷಿಕರು ಆಸಕ್ತಿ ವಹಿಸಿದಲ್ಲಿ ಜಾನುವಾರುಗಳಿಗೆ ಅಗತ್ಯವಾದ ಭತ್ತದ ಹುಲ್ಲನ್ನು ಸಂರಕ್ಷಿಸುವ ಮೂಲಕ ಜಾನುವಾರುಗಳ ರಕ್ಷಣೆ ಮತ್ತು ಪೋಷಣೆ ಮಾಡಿದಂತೆಯೂ ಆಗುತ್ತದೆನ್ನುವುದು ಹಲವರ ಅನಿಸಿಕೆ.
ಹೊಟ್ಟೆ ತುಂಬ ಉಣ್ಣುವ ನಾವು, ಮೂಕ ಪ್ರಾಣಿಗಳ ಹೊಟ್ಟೆ ತುಂಬುವ ಭತ್ತದ ಹುಲ್ಲಿನ ಸಂರಕ್ಷಣೆಯತ್ತ ಚಿಂತಿಸುವುದು ಅವಶ್ಯವಾಗಿದೆ.










