ಮಡಿಕೇರಿ ಏ.5 : ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವವು ಏ.6 ರಿಂದ 8ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ಪೂಜಾ ವಿಧಿವಿಧಾನಗಳು ಕುರಿತು ಮಾಹಿತಿ ನೀಡಿದರು.
ಏ.6 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಶಕ್ತಿಗಣಪತಿ ದೇವರಿಗೆ 21 ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮ, 8 ಗಂಟೆಗೆ ಕಲಶ ಪೂಜೆ, ಶ್ರೀ ನಾಗದೇವರಿಗೆ ನೂರುಂಪಾಲುಂ (ನಾಗತಂಬಿಲ) ಸಮರ್ಪಣೆ, 10.30 ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಲಿದೆ.
ಸಂಜೆ 4.30 ಗಂಟೆಗೆ ಕೇರಳದ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಶ್ರೀ ಬ್ಲಾತೂರ್ ಚಂದ್ರ್ ಮಡೆಯಚ್ಚನ್ ನೇತೃತ್ವದಲ್ಲಿ ಧ್ವಜಾರೋಹಣದ ಮೂಲಕ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ದೈವಕೋಲಗಳ ವೀಕ್ಷಣೆಗೆ ದಾನಿಗಳ ಸಹಾಯದಿಂದ ನಿರ್ಮಿಸಿದ ಶಾಶ್ವತ ಗ್ಯಾಲರಿಯನ್ನು ಮಾಜಿ ಸೈನಿಕ ದೇಲಂಪಾಡಿ ಗಣೇಶ್ ಉದ್ಘಾಟಿಸಲಿದ್ದಾರೆ.
ಸಂಜೆ 5.15 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 5.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಪಾರ್ವತಿ ದೇವಿಗೆ ಪುಷ್ಪಾರ್ಚನೆ ಮತ್ತು ದೀಪಾರಾಧನೆ ನಡೆಯಲಿದೆ.
ಏ.7 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮೊದಕಲಶ ಸ್ಥಾಪನೆ, ಸಂಜೆ 5.30 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆ ಕಟ್ಟೆ, ಮೈಸೂರು ರಸ್ತೆಯ ಡಿಪೊ ಬಳಿ, ಮೈತ್ರಿ ಜಂಕ್ಷನ್ ಹೀಗೆ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ಕಳಸ ಮೆರವಣಿಗೆಯು ಶ್ರೀ ಮುತ್ತಪ್ಪ ದೇವಾಲಯದ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿ, ಮಂಗಳೂರಿನ ಆಕರ್ಷಕ ಯಕ್ಷಗಾನ ವೇಷಗಳು, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಗುಂಡೂರಿ ವೇಣೂರು, ದಕ್ಷಿಣ ಕನ್ನಡ, ಚಿಂಗಾರಿ ಮೇಳಗಳು, ಆಕರ್ಷಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿದೆ ಎಂದರು.
ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 4.30 ಗಂಟೆಗೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, 5 ಗಂಟೆಗೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, 5.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಸಂಜೆ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, 9 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 9.30 ರಿಂದ 1.30 ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಲಿದೆ.
9.30 ಗಂಟೆಗೆ ಶ್ರೀ ಪೊವದಿ ವೆಳ್ಳಾಟಂ, 10.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಮಧ್ಯಾಹ್ನ 12 ಗಂಟೆಗೆ ಶ್ರೀ ಶಿವಭೂತ ತೆರೆ, ರಾತ್ರಿ 1 ಗಂಟೆಗೆ ಶ್ರೀ ಗುಳಿಗ ದೇವರ ತೆರೆ, 2 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, 2-30 ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ತೆರೆ ಜರುಗಲಿದೆ.
ಏ.8 ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, 8 ಗಂಟೆಗೆ ಶ್ರೀ ಪೊವ್ವದಿ ತೆರೆ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ 11.30 ಕ್ಕೆ ಧ್ವಜ ಅವರೋಹಣ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಾಂಪ್ರದಾಯಿಕ ಮೆರವಣಿಗೆಗೆ ಜಾತಿ ಭೇದವಿಲ್ಲದೆ ಪ್ರತಿ ಮನೆಯಿಂದಲೂ ಮಹಿಳೆಯರು ಮತ್ತು ಮಕ್ಕಳು ತಾಲಾಪೊಲಿ (ದೀಪ) ಮತ್ತು ಪೂರ್ಣಕುಂಭ ಕಲಶದೊಂದಿಗೆ ಶ್ರೀ ಮುತ್ತಪ್ಪ ದೇವರ ಉತ್ಸವ ಕಲಶವನ್ನು ನಗರಪ್ರದಕ್ಷಿಣೆ ಮಾಡುವುದರ ಮೂಲಕ ದೇವಾಲಯಕ್ಕೆ ಬರಮಾಡಿಕೊಂಡು ಎಲ್ಲಾ ದೇವತಾಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಾಲಯದಲ್ಲಿ ಪ್ರಸಾದ ವಿತರಣೆಯನ್ನು ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಪ್ರತಿ ವಿಶೇಷ ಉತ್ಸವಗಳಲ್ಲಿ ಸುಮಾರು ಹತ್ತು ಸಾವಿರದಷ್ಟು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್, ಮಹಿಳಾ ವೇದಿಕೆ ಅಧ್ಯಕ್ಷರಾದ ಶಾರದಾ ರಾಮನ್, ಉಪಾಧ್ಯಕ್ಷರಾದ ಕೂಡಂಡ ದೀಪಾ ಕಾವೇರಪ್ಪ, ದೇವಾಲಯ ಅರ್ಚಕರಾದ ಕೆ.ಎಸ್.ರಮೇಶ್, ದೇವಾಲಯ ಸಮಿತಿ ಸದಸ್ಯ ತೇಜ್ ರಾಜ್ ಉಪಸ್ಥಿತರಿದ್ದರು.