ಮಡಿಕೇರಿ ಏ.8 : ಬಿರು ಬಿಸಿಲು ಮತ್ತು ಭಾರೀ ಪ್ರಮಾಣದಲ್ಲಿ ಹೂಳು ತುಂಬಿರುವುದರಿAದ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಪ್ರಮುಖ ನೀರು ಸಂಗ್ರಹಗಾರ ಕೂಟುಹೊಳೆ ಸಂಪೂರ್ಣ ಬರಿದಾಗಿದೆ. ನಗರದ ಕೆಲವು ಬಡಾವಣೆಗಳ ನಿವಾಸಿಗಳು ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ.
ಜಲಾಶಯದಲ್ಲಿ ಪ್ರಸ್ತುತ 10ರಿಂದ 15 ಅಡಿಯಷ್ಟೇ ನೀರು ನಿಂತಿದ್ದು, ಡೆಡ್ ಸ್ಟೋರೇಜ್ ತಲುಪಿರುವ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಪಂಪ್ ಮಾಡಲು ಕೂಡ ಸಾಧ್ಯವಿಲ್ಲದಂತಾಗಿದೆ. ಮಳೆ ನೀರು ಮತ್ತು ಜಲ ಮೂಲವನ್ನು ನಂಬಿರುವ ಕೂಟುಹೊಳೆ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಬಾರದಿದ್ದಲ್ಲಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಆತಂಕವೂ ಎದುರಾಗಿದೆ. ಮೇ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮಕ್ಕೆ ತಿರುಗಲಿದೆ.
ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದ್ದು, ಜನತೆ ಸಹಕರಿಸುವಂತೆ ನಗರಸಭೆ ಮನವಿ ಮಾಡಿದೆ. ಕೂಟುಹೊಳೆಯಲ್ಲಿ ತುಂಬಿರುವ ಹೂಳನ್ನು ತೆಗೆಯದೆ ಇರುವುದರಿಂದ ನೀರಿನ ಶೇಖರಣೆಯಲ್ಲಿ ಕುಸಿತ ಕಂಡು ಬಂದಿದೆ. ಬೇಸಿಗೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇಷ್ಟು ದಿನ ಸುಮ್ಮನಿದ್ದ ನಗರಸಭೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
::: ಕುಂಡಾಮೇಸ್ತ್ರಿ ನೀರು :::
ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಣಚಲು ಬಳಿ ಕುಂಡಾಮೇಸ್ತ್ರಿ ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು, ಪ್ರಸ್ತುತ ಅಲ್ಲಿಂದ ನೈಸರ್ಗಿಕ ನೀರನ್ನು ಕೂಟುಹೊಳೆ ಜ್ಯಾಕ್‌ವೆಲ್‌ಗೆ ಪಂಪ್ ಮಾಡಲಾಗುತ್ತಿದೆ. ಕುಂಡಾಮೇಸ್ತ್ರಿ ಕಿರು ಅಣೆಕಟ್ಟೆಯ ಹೈಡ್ರಾಲಿಕ್ ಡೋರ್‌ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ನೈಸರ್ಗಿಕವಾಗಿ ಹರಿಯುವ 2 ಕಿರು ತೊರೆಗಳ ನೀರನ್ನು ಸಂಗ್ರಹಿಸಲಾಗಿದೆ. ಕುಂಡಾಮೇಸ್ತ್ರಿ ಜ್ಯಾಕ್‌ವೆಲ್‌ನಲ್ಲಿ 300 ಹೆಚ್.ಪಿ. ಸಾಮರ್ಥ್ಯದ 3 ಪಂಪ್‌ಗಳಿದ್ದು, 2 ಪಂಪ್‌ಗಳಲ್ಲಿ ಏಕಕಾಲಕ್ಕೆ ಕೂಟುಹೊಳೆ ಜ್ಯಾಕ್‌ವೆಲ್‌ಗೆ ನೀರು ಪೂರೈಸಲಾಗುತ್ತಿದೆ. ಆದರೆ ಕೋಟ್ಯಾಂತರ ರೂ. ಖರ್ಚು ಮಾಡಿ ಅನುಷ್ಠಾನಗೊಳಿಸಿದ ಕುಂಡಾಮೇಸ್ತ್ರಿ ಯೋಜನೆಯಿಂದ ನಗರಕ್ಕೆ ನಿರೀಕ್ಷಿತ ನೀರು ಪೂರೈಕೆಯಾಗುತ್ತಿಲ್ಲ. ಇದೀಗ ಸಿಗುವಷ್ಟು ನೀರನ್ನು ಕೂಟುಹೊಳೆಯಿಂದ ನಗರಕ್ಕೆ ದಿನ ಬಿಟ್ಟು ದಿನ ಸರಬರಾಜು ಮಾಡಲಾಗುತ್ತಿದೆ.
::: ಬತ್ತಿದ ಜಲಮೂಲಗಳು :::
ಕಳೆದ ಕೆಲವು ದಿನಗಳಿಂದ ಮಡಿಕೆರಿ ನಗರದ ತಾಪಮಾನ 34 ಡಿಗ್ರಿ ದಾಖಲಾಗುತ್ತಿದ್ದು, ಸುಡು ಬಿಸಿಲಿಗೆ ನೈಸರ್ಗಿಕ ಜಲಮೂಲಗಳು ಬತ್ತಿ ಹೋಗಿವೆ. ಕೂಟುಹೊಳೆ ಮಾತ್ರವಲ್ಲದೇ, ಮಡಿಕೇರಿ ನಗರಕ್ಕೆ ಕನ್ನಂಡಬಾಣೆ ಪಂಪ್ ಕೆರೆ, ರೋಶನಾರ ಕೆರೆ, ಉಕ್ಕಡ ಪಂಪ್ ಕೆರೆಗಳ ಮೂಲಕವೂ ಪ್ರತಿ ದಿನ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಜಲಮೂಲಗಳು ಕೂಡ ಬತ್ತಿರುವ ಹಿನ್ನೆಲೆಯಲ್ಲಿ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.










