ಮಡಿಕೇರಿ ಏ.18 : ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಕೊಡಗಿನ ಜಮ್ಮಾ ಹಿಡುವಳಿದಾರ ಕೆಲವು ಅಪರಾಧ ಪ್ರಕರಣಗಳ ಆರೋಪಿಗಳಿಂದ ಕೋವಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಶ್ರೀ ಕಾವೇರಮ್ಮ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟ್ ನ ಅಧ್ಯಕ್ಷ ಎಂ.ಬಿ.ದೇವಯ್ಯ, ಪ್ರತಿ ಚುನಾವಣೆ ಸಂದರ್ಭ ಲೈಸೆನ್ಸ್ ಹೊಂದಿರುವ ಕೋವಿಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟುಕೊಳ್ಳುವುದು ಸಾಮಾನ್ಯ. ಈ ನಿಯಮದಿಂದ ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಪ್ರಸ್ತುತ ನೀತಿ ಸಂಹಿತೆ ಜಾರಿಯಾದ ನಂತರ ಪೊಲೀಸರು ಅಪರಾಧ ಸಾಬೀತಾಗದ ವಿಚಾರಣೆ ಹಂತದ ಜಮ್ಮಾ ಹಿಡುವಳಿದಾರ ಆರೋಪಿಗಳಿಂದ ಕೋವಿಯನ್ನು ಠೇವಣಿ ಇಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋವಿ ಜಮ್ಮಾ ಹಿಡುವಳಿದಾರರ ಹಕ್ಕಾಗಿದೆ, ಕೋವಿ ಹೊಂದಿರುವವರಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಯಾವುದೇ ಅಶಾಂತಿಯ ವಾತಾವರಣ ಸೃಷ್ಟಿಯಾಗಿಲ್ಲ. ಪ್ರತಿ ಚುನಾವಣೆಯೂ ಶಾಂತಿಯುತವಾಗಿ ನಡೆದಿದ್ದು, ಕೋವಿಯಿಂದ ಅನಾಹುತಗಳು ಸಂಭವಿಸಿಲ್ಲ. ಕೊಡಗಿನ ಜನ ಪ್ರಜ್ಞಾವಂತರಾಗಿದ್ದು, ಕೋವಿ ಹಕ್ಕನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಕೋವಿ ಠೇವಣಿ ಇಡುವಂತೆ ಜಮ್ಮಾ ಹಿಡುವಳಿದಾರರ ಮೇಲೆ ಒತ್ತಡ ಹೇರುವುದನ್ನು ತಕ್ಷಣ ನಿಲ್ಲಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಪೊಲೀಸ್ ಇಲಾಖೆಗೆ ಈ ಕುರಿತು ನಿರ್ದೇಶನ ನೀಡಬೇಕು ಎಂದು ದೇವಯ್ಯ ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯ ಚುನಾವಣಾ ಅಧಿಕಾರಿಗಳು ಹಾಗೂ ಗೃಹ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.








