ಮಡಿಕೇರಿ ಏ.22 : ಶಾದಿಭಾಗ್ಯ ಮತ್ತು ಟಿಪ್ಪು ಜಯಂತಿಯನ್ನು ಆಚರಿಸುವಂತೆ ಯಾರೂ ಕೇಳಿರಲಿಲ್ಲ, ಅವು ಹಿಂದಿನ ಕಾಂಗ್ರೆಸ್ ಸರ್ಕಾರದ ಒಡೆದು ಆಳುವ ನೀತಿಯ ತಂತ್ರಗಳಾಗಿದ್ದವು ಎಂದು ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು ಶಾದಿಭಾಗ್ಯ ಕೆಟ್ಟ ಯೋಜನೆ ಎಂದು ಹೇಳುತ್ತಿಲ್ಲ. ಆದರೆ ಅದರ ಅಗತ್ಯವೇ ಇರಲಿಲ್ಲ. ಯೋಜನೆಗೆ ಭಾರೀ ಪ್ರಚಾರ ಕೊಡಲಾಯಿತೇ ಹೊರತು, ಅದರ ಫಲ ಪಡೆದವರ ಸಂಖ್ಯೆ ತೀರಾ ಕಡಿಮೆ ಎಂದು ಅಪ್ಪಚ್ಚುರಂಜನ್ ಹೇಳಿದರು.
ಶಾದಿ ಭಾಗ್ಯ ಯೋಜನೆಯನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿತೇ ಹೊರತು ಅದರಿಂದ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದು ಟೀಕಿಸಿದರು.
ಟಿಪ್ಪು ಜಯಂತಿ ಸೃಷ್ಟಿಸಿದ ಅನಾಹುತ ಎಲ್ಲರಿಗೂ ಗೊತ್ತೇ ಇದೆ, ಅದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ ಎಂದ ಅಪ್ಪಚ್ಚು ರಂಜನ್, ಜನತಂತ್ರದಲ್ಲಿ ಜನರಿಗೆ ಬೇಡವಾದ ವಿಷಯಗಳನ್ನು ಹೇರಲಾಗುವುದಿಲ್ಲ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ವಕ್ತಾರ ವಕೀಲ ಅಭಿಮನ್ಯು ಕುಮಾರ್, ಪಕ್ಷ ಪ್ರಮುಖರಾದ ಮಾದಪ್ಪ, ಸೇರಿದಂತೆ ಹಲವಾರು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.










