ಮಡಿಕೇರಿ ಮೇ 6 : ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರ ಪರ ಪ್ರಚಾರದಲ್ಲಿ ತೊಡಗಿರುವ ಬುದ್ಧಿ ಜೀವಿ ಅಡ್ಡಂಡ ಕಾರ್ಯಪ್ಪ ಅವರು ಇಡೀ ಕೊಡವ ಜನಾಂಗವನ್ನು ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ. ಬಿಜೆಪಿ ಗೆ ಕೊಡವರ ಮೇಲೆ ನೈಜ ಪ್ರೀತಿ ಇದ್ದರೆ ಕಾರ್ಯಪ್ಪ ಅವರನ್ನು ಪಕ್ಷದಿಂದ ತಕ್ಷಣ ಉಚ್ಛಾಟಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀಣಾ ಅಚ್ಚಯ್ಯ, ಕೊಡವರು ಹಾಗೂ ಕೊಡವತಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾರ್ಯಪ್ಪ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.
ಅಭಿವೃದ್ಧಿ ಪರ ಚಿಂತನೆಯನ್ನು ಮರೆತು ವೈಯುಕ್ತಿಕ ತೆಜೋವಧೆ ಮಾಡುವ ಮೂಲಕ ಮತ ಗಳಿಸುವುದು ಬಿಜೆಪಿಯ ಚಾಳಿಯಾಗಿದೆ. ಅಡ್ಡಂಡ ಕಾರ್ಯಪ್ಪ ಅವರು ಒಬ್ಬ ಕೊಡವನಾಗಿ ಇಡೀ ಕೊಡವ ಸಮುದಾಯವನ್ನು ತೇಜೋವಧೆ ಮಾಡಿದ್ದಾರೆ. ನಾನೊಬ್ಬ ಕೊಡವ ಹೆಣ್ಣುಮಗಳಾಗಿ ಹೇಳಿಕೊಳ್ಳಲಾಗದಂತಹ ಅವಾಚ್ಯ ಶಬ್ಧಗಳನ್ನು ಅವರು ಬಳಕೆ ಮಾಡಿದ್ದಾರೆ, ಇದರಿಂದ ನನಗೆ ತುಂಬಾ ನೋವಾಗಿದೆ. ಕಾರ್ಯಪ್ಪ ಅವರು ಹೀಗೆ ಮಾತನಾಡುವಾಗ ಪಕ್ಕದಲ್ಲೇ ಬಿಜೆಪಿ ಅಭ್ಯರ್ಥಿ ಇದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ಬೆಂಬಲಿಗರು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. ಸೋಲಿನ ಭೀತಿಯನ್ನು ಎದುರಿಸುತ್ತಿರುವ ಬಿಜೆಪಿ ಭ್ರಮನಿರಸನಗೊಂಡು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಕಾವೇರಿ ತಾಯಿ ಮತ್ತು ಕೊಡವತಿಯರ ಬಗ್ಗೆ ಅವಹೇಳನ ಮಾಡಿದ ಪ್ರಕಣವೊಂದಕ್ಕೆ ಸಂಬಂಧಿಸಿದಂತೆ ಅಮಾಯಕ ಮುಸ್ಲಿಂ ಯುವಕನನ್ನು ಬಲಿಪಶು ಮಾಡಲು ಹುನ್ನಾರ ನಡೆದಿತ್ತು. ಆದರೆ ಅಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಅಯ್ಯಪ್ಪ ಅವರು ನೈಜ ಆರೋಪಿಯನ್ನು ಪತ್ತೆ ಹಚ್ಚಿದ್ದರು. ಆ ಆರೋಪಿ ಬಿಜೆಪಿ ಪ್ರಮುಖರ ಪುತ್ರ ಎಂಬುವುದು ಸಾಬಿತಾಗಿತ್ತು. ಹಿಂದೂ- ಮುಸ್ಲಿಮರ ನಡುವೆ ಕಂದಕ ನಿರ್ಮಿಸಿ ಧರ್ಮ ಆಧಾರಿತ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾಜದಲ್ಲಿ ಒಡಕು ಮೂಡಿಸುವ ಬಿಜೆಪಿ ಬಗ್ಗೆ ಕೊಡಗಿನ ಜನರಿಗೆ ಸಾಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಡ್ಡಂಡ ಕಾರ್ಯಪ್ಪ ಅವರನ್ನು ಜೊತೆಯಲ್ಲಿಟ್ಟುಕೊಂಡು ಚುನಾವಣೆ ಗೆಲ್ಲುತ್ತೇನೆ ಎನ್ನುವ ಭ್ರಮೆಯಲ್ಲಿ ಕೆ.ಜಿ.ಬೋಪಯ್ಯ ಅವರು ಇದ್ದಾರೆ ಎಂದು ವ್ಯಂಗ್ಯವಾಡಿದರು.
ಕಾರ್ಯಪ್ಪ ಅವರ ಬಗ್ಗೆ ಎಲ್ಲರಿಗೆ ಜಿಗುಪ್ಸೆ ಬಂದಿದೆ. ಕಾರ್ಯಪ್ಪ ಅವರು, ಇಡೀ ಕೊಡವ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಗೆಲುವಿನ ಹೊಸ್ತಿಲಲ್ಲಿದೆ, ನಮ್ಮಲ್ಲಿ ಕೊಡವ, ಗೌಡ ಅಥವಾ ಇತರ ಸಮುದಾಯ ಎನ್ನುವ ಭೇದಭಾವವಿಲ್ಲ. ನಾವೆಲ್ಲರೂ ಜಾತ್ಯಾತೀತ ಮನೋಭಾವದವರಾಗಿದ್ದು, ಎಲ್ಲರ ಬೆಂಬಲ ಪೊನ್ನಣ್ಣ ಅವರಿಗಿದೆ. ಪೊನ್ನಣ್ಣ ಅವರು ಒಬ್ಬ ಉತ್ತಮ ವ್ಯಕ್ತಿತ್ವದ ದಕ್ಷ ರಾಜಕರಣಿಯಾಗಿದ್ದು, ಇವರ ಬಳಿ ಕುಳಿತುಕೊಳ್ಳುವ ಯೋಗ್ಯತೆ ಕೂಡ ಕಾರ್ಯಪ್ಪ ಅವರಿಗೆ ಇಲ್ಲವೆಂದು ಟೀಕಿಸಿದರು.
ಬಿಜೆಪಿ ಮಂದಿ ಪೊನ್ನಣ್ಣ ಅವರಿಗೆ ಇನ್ನಿಲ್ಲದ ನೋವು ನೀಡುತ್ತಿದ್ದಾರೆ. ಪೊನ್ನಣ್ಣ ಅವರನ್ನು ತೇಜೋವಧೆ ಮಾಡಿದಷ್ಟು ಜನ ಬೆಂಬಲ ಹೆಚ್ಚಾಗುತ್ತಲೇ ಇದೆ. ಚುನಾವಣೆಯಲ್ಲಿ ಅವರು ಗೆಲುವು ಸಾಧಿಸುವ ಮೂಲಕ ನೋವು ನಿವಾರಣೆಯಾಗಲಿದೆ ಎಂದು ವೀಣಾ ಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರು ಕೂಡ ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಕಳೆದ ಎರಡು ವರ್ಷಗಳಿಂದ ಜಿ.ಪಂ ಚುನಾವಣೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ದೇವಾಲಯ ವ್ಯವಸ್ಥಾಪನಾ ಸಮಿತಿಯನ್ನು ಇಲ್ಲಿಯವರೆಗೆ ರಚಿಸಿಲ್ಲ, ಭಾಗಮಂಡಲ ಮೇಲು ಸೇತುವೆ ಯೋಜನೆ ಮತ್ತು ಕೊಡವ ಹೆರಿಟೇಜ್ ಕೇಂದ್ರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ನೀಡುವ ಪ್ರಯತ್ನ ಮಾಡಿಲ್ಲ. ಕೇವಲ ಅಪಪ್ರಚಾರ, ವೈಯುಕ್ತಿಕ ತೇಜೋವಧೆ, ಸರಣಿ ಸುಳ್ಳುಗಳ ಮೂಲಕ ಮತಯಾಚಿಸುತ್ತಿರುವ ಬಿಜೆಪಿಗೆ ಜಿಲ್ಲೆಯ ಜನ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಲ್ಲೆಯ ಇಬ್ಬರು ಶಾಸಕರು ಎಲ್ಲಾ ಅಭಿವೃದ್ಧಿ ಕಾರ್ಯವನ್ನು ಮುಗಿಸಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರು, ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರಿಗೆ ಯಾವುದೇ ಕೆಲಸ ಉಳಿದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಖ್ಯ ರಸ್ತೆಗಳಿಗೆ ತೇಪೆ ಹಾಕಿದ್ದು ಬಿಟ್ಟರೆ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಶಾಸಕರ ನಿರ್ಲಕ್ಷ್ಯಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ವೀಣಾ ಅಚ್ಚಯ್ಯ ತಿಳಿಸಿದರು.
ಶಾಂತೆಯಂಡ ಹಾಕಿ ಉತ್ಸವಕ್ಕೆ ನಮ್ಮ ಸರ್ಕಾರವಿದ್ದಾಗ ನಾನು ಯಾವುದೇ ಅನುದಾನ ತರಲಿಲ್ಲ ಎಂದು ಪ್ರತಾಪ್ ಸಿಂಹ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ. ನಮ್ಮ ಸರ್ಕಾರ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, 30 ಲಕ್ಷ ರೂ. ನ ಚೆಕ್ ಅನ್ನು ನಾನೇ ಆಯೋಜಕರಿಗೆ ಹಸ್ತಾಂತರಿಸಿದ್ದೇನೆ. ಪ್ರತಾಪ್ ಸಿಂಹ ಅವರು ಚಿಲ್ಲರೆ ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಅವರು ಒತ್ತಾಯಿಸಿದರು.
ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರು ಹೊರಗಿನವರು ಎಂದು ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಪ್ರತಾಪ್ ಸಿಂಹ ಅವರು ಎಲ್ಲಿಯವರೆಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಅಮಿತ್ ಶಾ ಅವರು ಮಡಿಕೇರಿಗೆ ಆಗಮಿಸಿದ್ದಾಗ ಕೇವಲ ಎರಡು ಸಾವಿರದಷ್ಟು ಮಂದಿ ಜಮಾಯಿಸಿದ್ದೆ ಬಿಜೆಪಿ ಸೋಲು ಅನುಭವಿಸಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು.
ಅಡ್ಡಂಡ ಕಾರ್ಯಪ್ಪ ಅವರು ನೀಡುತ್ತಿರವ ಹೇಳಿಕೆಗಳಿಗೆ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರೇ ನೇರ ಹೊಣೆಗಾರರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರುಗಳ ಎದುರಲ್ಲೆ ಕೊಡವ ಜನಾಂಗದ ಬಗ್ಗೆ ಕೇವಲವಾಗಿ ಕಾರ್ಯಪ್ಪ ಅವರು ಮಾತನಾಡುವಾಗ ನಿಲ್ಲಿಸುವಂತೆ ಯಾರೂ ಹೇಳಿಲ್ಲ. ಇದು ಖಂಡನೀಯ ಎಂದ ಅವರು, ಕಾರ್ಯಪ್ಪ ಅವರು ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಯಂಡ ಕಾಶಿ ಕುಶಾಲಪ್ಪ, ಜಿಲ್ಲಾ ಕಾಂಗ್ರೆಸ್ ಸದಸ್ಯ ಲವ ಚಿಣ್ಣಪ್ಪ ಹಾಗೂ ಪ್ರಮುಖರಾದ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.







