ಮಡಿಕೇರಿ ಮೇ 6 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು, ನನಗೆ ಯಾರೂ ಪ್ರತಿಸ್ಪರ್ಧಿ ಇಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ. ಕಳೆದ 25 ವರ್ಷಗಳ ಕಾಲ ಇವರಿಗೆ ಪ್ರತಿಸ್ಪರ್ಧಿ ಇಲ್ಲದಿರಬಹುದು. ಆದರೆ ಈಗ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ರಂಜನ್ ಅವರನ್ನು ಸೋಲಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದವರು ಮತ್ತೆ ಮತ್ತೆ ಗೆದ್ದು ಬರುತ್ತಿರುವುದು ಹೇಗೆ ಎಂದೇ ತಿಳಿಯುತ್ತಿಲ್ಲ. ಗೆದ್ದ ನಂತರ ಐದು ವರ್ಷ ಸುಮ್ಮನಿದ್ದು, ಚುನಾವಣೆ ಸಂದರ್ಭ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಕೊನೆಯ ಮೂರು ದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ ಹೊರತು ಅಭಿವೃದ್ಧಿಪರ ಚಿಂತನೆಯನ್ನೇ ಮಾಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತವಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಅನಿವಾರ್ಯವಾಗಿದೆ. ಇವರುಗಳು ಗೆದ್ದರೆ ಅಭಿವೃದ್ಧಿ ಕಾರ್ಯಗಳು ಸುಲಭವಾಗಲಿದೆ, ಮಂತರ್ ಗೌಡ ಪರ ನಿರೀಕ್ಷೆಗೂ ಮೀರಿ ಜನ ಬೆಂಬಲವಿದೆ ಎಂದರು.
ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ಬಿಜೆಪಿ ಅವರದ್ದೇ ಆಗಿದೆ. ಆದರೆ ಯಡಿಯೂರಪ್ಪ, ಈಶ್ವರಪ್ಪ, ಹೆಚ್.ಡಿ.ರೇವಣ್ಣ, ರೇಣುಕಾಚಾರ್ಯ ಅವರ ಕ್ಷೇತ್ರಗಳಲ್ಲಾದ ಅಭಿವೃದ್ಧಿ ಕಾರ್ಯ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ. ಇದಕ್ಕೆ ಶಾಸಕರುಗಳ ವೈಫಲ್ಯವೇ ಕಾರಣ ಎಂದು ಟೀಕಿಸಿದರು.
ಶಾಸಕರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸಕ್ತಿ ಇಲ್ಲ. ಕುಶಾಲನಗರ ಪ್ರತ್ಯೇಕ ತಾಲ್ಲೂಕು ಹೋರಾಟದಲ್ಲಿ ನಾವುಗಳೇ ಪ್ರಮುಖ ಪಾತ್ರ ವಹಿಸಿದ್ದೇವೆ. ಕುಶಾಲನಗರದಲ್ಲಿ ಮಳೆ ಸಂದರ್ಭ ಮನೆಗಳು ಮುಳುಗಡೆಯಾಗುತ್ತವೆ. ಆದರೆ ಇದಕ್ಕೊಂದು ಶಾಶ್ವತ ಪರಿಹಾರವನ್ನು ಸೂಚಿಸಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಅವರು, ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿರಂತರವಾಗಿ ಅಪ್ಪಚ್ಚು ರಂಜನ್ ಅವರು ಜೀವಿಜಯ ಅವರನ್ನು ಸೋಲಿಸುತ್ತಲೇ ಬಂದಿದ್ದಾರೆ. ಆದರೆ ಇಂದು ಜಾತ್ಯತೀತ ಮನೋಭಾವದ ಜೀವಿಜಯ ಅವರು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಜೀವಿಜಯ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಕಹಿ ಅನುಭವವೇ ಹೆಚ್ಚು ಆಗಿದೆ. ಯುವ ರಾಜಕರಣಿ ಮಂತರ್ ಗೌಡ ಅವರಿಗೆ ಜೀವಿಜಯ ಅವರು ಬೆಂಬಲ ನೀಡಬಹುದಿತ್ತು ಎಂದು ಚಂದ್ರಕಲಾ ಅಭಿಪ್ರಾಯಪಟ್ಟರು.
ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು, ಮೊದಲು ಜಿ.ಪಂ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ತೋರಿಸಲಿ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಪ್ರಧಾನಿಯಾದಿಯಾಗಿ ಕೇಂದ್ರದ ಸಚಿವರುಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕೋಟ್ಯಾಂತರ ಹಣ ಪೋಲಾಗುತ್ತಿದೆ. ಮುಖ್ಯಮಂತ್ರಿಗಳು ಕೂಡ ಬಿಜೆಪಿ ಕಾರ್ಯಕರ್ತನಂತೆ ನಡೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜನರ ಹಣ ನಷ್ಟವಾಗುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಏನನ್ನೂ ನೀಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದರೆ 10 ಕೆ.ಜಿ.ಅಕ್ಕಿ ಉಚಿತ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಭ್ರಷ್ಟಚಾರ ಮುಕ್ತ ಆಡಳಿತವನ್ನು ನಾವು ನೀಡಲಿದ್ದೇವೆ ಎಂದು ಮಂಜುನಾಥ್ ಕುಮಾರ್ ಭರವಸೆ ನೀಡಿದರು.
ಕುಶಾಲನಗರ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಪ್ರಕಾಶ್ ಮಾತನಾಡಿ, ಮಾಜಿ ಸಚಿವ ಜೀವಿಜಯ ಅವರು, ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಂಡಿಲ್ಲ. ಕಾಂಗ್ರೆಸ್‍ನಲ್ಲಿ ಏಳು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾಗ ಆಯ್ಕೆಯಾಗುವ ಒಬ್ಬರಿಗೆ ಸಂಪೂರ್ಣವಾಗಿ ಬೆಂಬಲ ನೀಡೋಣ ಎಂದು ಹೇಳಿದ್ದರು. ಆದರೆ ಅವರು ಇದೀಗ ತಮ್ಮ ಮಾತನ್ನು ಬದಲಾಯಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಹಾಗೂ ಒಕ್ಕಲಿಗರ ಸಂಘದ ಸದಸ್ಯ ವಿ.ಜೆ.ನವೀನ್ ಉಪಸ್ಥಿತರಿದ್ದರು.







