ವಿರಾಜಪೇಟೆ ಮೇ 16 : ರೈತರ ಹೆಸರಿನಲ್ಲಿ ಸ್ಥಾಪನೆಯಾದ ಸರ್ವೋದಯ ಕರ್ನಾಟಕ ಪಕ್ಷದ ಏಕೈಕ ಶಾಸಕ ದರ್ಶನ್ ಪುಟ್ಟಣಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕವು ಭೇಟಿ ನೀಡಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದ ನಿಯೋಗವು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿತ ಮಂಡ್ಯ ಜಿಲ್ಲೆ ಮೆಲುಕೋಟೆಯ ಶಾಸಕ ದರ್ಶನ್ ಪುಟ್ಟಣಯ್ಯ ಅವರನ್ನು ಮಂಡ್ಯ ನಗರದ ಪ್ರವಾಸಿ ಮಂದಿರಲ್ಲಿ ಭೇಟಿ ಮಾಡಿ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕೊಡಗು ಜಿಲ್ಲೆಯು ಪುಟ್ಟದಾದರು ರಾಜ್ಯ ಮತ್ತು ಕೇಂದ್ರಕ್ಕೆ ಅಪಾರ ಪ್ರಮಾಣದಲ್ಲಿ ತೆರಿಗೆಯನ್ನು ನೀಡುತ್ತಿದೆ. ಇಲ್ಲಿ ಕಾಡಾನೆ ಮಾನವ ಸಂಘರ್ಷ, ವನ್ಯಜೀವಿಗಳಿಂದ ಕಾಫಿ ಸೇರಿದಂತೆ ಇತರ ಬೆಳೆಗಳಿಗೆ ಹಾನಿ, ಅಡಿಕೆ ಮತ್ತು ಭತ್ತ ಇತರ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ರೈತರಿಗೆ ಹತ್ತು ಹೆಚ್.ಪಿ ವರೆಗಿನ ಉಚಿತ ವಿದ್ಯುತ್ ವಿತರಣೆಯ ಬಗ್ಗೆ ಶಾಸಕರಿಗೆ ಮನ ಮುಟ್ಟುವಂತೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಶಾಸಕರು ಸಮಸ್ಯೆಗಳನ್ನು ವಿಧಾನ ಸಭೆ ಅಧಿವೇಶನದಲ್ಲಿ ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಅಲ್ಲದೆ ಶಾಶ್ವತ ಪರಿಹಾರ ಒದಗಿಸಿಕೊಡುವಲ್ಲಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಬಳಿಕ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಶಾಸಕರು, ರೈತರು ದೇಶದ ಬೆನ್ನಲುಬು, ರಾಜ್ಯದಲ್ಲಿ ರೈತರ ಸಮಸ್ಯೆ ಅಗಾಧವಾಗಿದೆ. ರಾಜ್ಯದ ವಿವಿಧೆಡೆಗಳಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವುದು ಮನಕಂಡಿದ್ದೇನೆ. ರೈತರ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿ ಪರವಾಗಿ ಕಾರ್ಯ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು. ಪುಟ್ಟ ಜಿಲ್ಲೆಯಾದ ಕೊಡಗು ನಾಡಿನ ದಾಹದಣಿಸುವ ಕಾವೇರಿಯ ಉಗಮಸ್ಥಾನವಾಗಿದೆ. ನೀರುಣಿಸುವ ಕಾವೇರಿ ನಾಡಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆಯ ಮಾತಗಳನ್ನಾಡಿದರು.
ಈ ಸಂದರ್ಭ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಜೈ ಬೋಪಯ್ಯ, ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕೋಶಾಧಿಕಾರಿಗಳಾದ ಸಭಿತ ಭೀಮಯ್ಯ, ಪೊನ್ನಂಪೇಟೆ ವಲಯ ಅಧ್ಯಕ್ಷ ಅಲೆಮಾಡ ಮಂಜುನಾಥ್, ಮನುಕುಮಾರ್, ಪುಚ್ಚಿಮಾಡ ರಾಯ್ ಪ್ರಮುಖರಾದ ಮಲ್ಚೀರ ಅಶೋಕ್ ಮುಂತಾದವರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ