ಮಡಿಕೇರಿ ಮೇ 19 : ಮೈಸೂರಿನ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕನ್ನಡದಲ್ಲಿ ವಿಜ್ಞಾನ ಮತ್ತು ವಾಣಿಜ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಕರ್ನಾಟಕದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕಾಲೇಜಿಗೆ ಈ ಬಾರಿ ಅತ್ಯುತ್ತಮ ಫಲಿತಾಂಶ ಕೂಡ ಬಂದಿರುವುದು ಮತ್ತೊಂದು ಸಂತಸದ ವಿಷಯ. ವಾಣಿಜ್ಯದಲ್ಲಿ ಶೇ.75 ವಿದ್ಯಾರ್ಥಿಗಳು ಪಾಸಾಗಿದ್ದು, ವಿಜ್ಞಾನದಲ್ಲಿ ಶೇ.60 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದರೂ ಕೂಡ ಇಂಗ್ಲೀಷ್ ನಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯದಲ್ಲಿ ಪೂಜಾ ಶೇ.79.33 ಪಡೆದಿದ್ದು, ನಾಲ್ಕು ವಿದ್ಯಾರ್ಥಿಗಳು ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಈ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತದೆ. ಈ ಸಂಸ್ಥೆ ಮತ್ತು ಇಲ್ಲಿನ ಶಿಕ್ಷಕರು ಅಳವಡಿಸಿದ ಬೋಧನಾ ಕ್ರಮಗಳು ಈ ಯಶಸ್ಸಿಗೆ ಕಾರಣ.
ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಎಂಬ ನೀತಿಗೆ ಅನುಸಾರವಾಗಿ ಸಂಸ್ಥೆಯು ಮೂವತ್ತ ಮೂರು ವರ್ಷದಿಂದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ದಾರಿಯಾಗಲೆಂದು ನಮ್ಮಲ್ಲಿಯೇ ನೃಪತುಂಗ ಬಿ.ಸಿ.ಎ ಮತ್ತು ಬಿ.ಕಾಂ ಪದವಿ ಕಾಲೇಜನ್ನು ಕೂಡ ತೆರೆದಿದ್ದೇವೆ. ಉತ್ತಮ ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಉದ್ಯೋಗ ದೃಢತೆ ಪದವಿ ಶಿಕ್ಷಣದ ಅತಿ ಮುಖ್ಯ ಅಂಶಗಳು. ಕನ್ನಡದಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಲ್ಲಿ ಸಂಸ್ಥೆಯು ಉತ್ತಮ ಸಹಕಾರ ನೀಡುತ್ತದೆ.
ಕೈಗೆಟಕುವ ಶುಲ್ಕದಲ್ಲಿ ಹೊರಗಡೆಯ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ. ವಿಜ್ಞಾನವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ, ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, ಸಿ.ಎ.3, ಇ ಮತ್ತು ಎಫ್ ಬ್ಲಾಕ್, ರಾಮಕೃಷ್ಣನಗರ, ಮೈಸೂರು. ದೂ. 6366709737 ನ್ನು ಸಂಪರ್ಕಿಸಬಹುದು.









