ವಿರಾಜಪೇಟೆ ಮೇ 30 : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ನಾಮೆರ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಗೋಣಿಕೊಪ್ಪದ ಪ್ಲಾಂಟರ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕುಟುಂಬದ ಪ್ರಮುಖರು ಆತ್ಮೀಯವಾಗಿ ಸನ್ಮಾನಿ¸ಸಿ ಗೌರವಿಸಿದರು.
ಈ ಸಂದರ್ಭ ಸ್ವೀಕರಿಸಿ ಮಾತನಾಡಿದ ಐಮುಡಿಯಂಡ ರಾಣಿ ಮಾಚಯ್ಯ, ಜಾನಪದ ಕಲಾ ಪ್ರಕಾರವಾದ ಉಮ್ಮತಾಟ್ ಕಲಾ ಪ್ರಕಾರವನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದು ನುಡಿದರು.
ಉಮ್ಮತ್ತಾಟ್ ಕಲಾ ತಂಡವನ್ನು ಕಟ್ಟಿಕೊಂಡು ಮಕ್ಕಳಿಗೆ ಕಲೆಯನ್ನು ಕಲಿಸಿ ದೇಶದೆಲ್ಲೆಡೆ ಕರೆದುಕೊಂಡು ಹೋಗಿ ಅನೇಕ ಬಾರಿ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿದ್ದೇನೆ. ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವಿರಾಜಪೇಟೆಯ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ನಾಮೆರ ಜಾನಕಿ ಕುಟ್ಟಪ್ಪ ಅವರು ಸಾಧನೆಯ ಹಾದಿಯತ್ತ ಮುನ್ನುಗ್ಗುತ್ತಿರುವ ಭಾರತ ದೇಶದ ಹೆಮ್ಮೆಯ ನಾಗರಿಕ ಪ್ರಶಸ್ತಿಯನ್ನು ಗಿಟ್ಟಿಸಿರುವ ರಾಣಿ ಮಾಚಯ್ಯ ತನ್ನ ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ. ಪಟ್ಟಿರುವ ಕಷ್ಟವನ್ನು ತಾಳ್ಮೆಯಿಂದ ಸಹಿಸುತ್ತಾ ಈ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ದೇವರು ಹಾಗೂ ಜನರ ಆಶೀರ್ವಾದ ಯಾವಾಗಲೂ ಇರಲಿ ಎಂದು ಆಶಿಸಿದರು.
ವಿರಾಜಪೇಟೆ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ತಾತಂಡ ಜ್ಯೋತಿ ಪ್ರಕಾಶ್ ಮುಖ್ಯ ಅತಿಥಿಗಳೂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಣಿ ಮಾಚಯ್ಯ ಅವರನ್ನು ಪರಿಚಯಿಸಿದರು.
ನಾಮೆರ ಝಾನ್ಸಿ ಕುಟ್ಟಪ್ಪ ಮತ್ತು ಮಿನು ಮುತ್ತಮ್ಮ ಪ್ರಾರ್ಥಿಸಿದರೆ, ನಾಮೆರ ರವಿ ದೇವಯ್ಯ ಸ್ವಾಗತಿಸಿದರು. ನಾಮೆರ ಸರಿತ ದೇವಯ್ಯ ವಂದಿಸಿದರು.









