ಮಡಿಕೇರಿ ಜೂ.11 : ವಿದ್ಯಾರ್ಥಿಗಳು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ಸೋಮವಾರಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಕರೆ ನೀಡಿದರು.
ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ., ಜೆ.ಸಿ.ಬೋಸ್ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಹಾಗೂ ಸುಂಟಿಕೊಪ್ಪ ಜೆ.ಸಿ.ಐ.ಘಟಕದ ವತಿಯಿಂದ ‘ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕವಾದ ನಿರ್ವಹಣೆ ಪರಿಸರ ಮತ್ತು ಜೀವ- ಸಂಕುಲದ ಸಂರಕ್ಷಣೆ’ ಎಂಬ ಕೇಂದ್ರ ವಿಷಯದಡಿ ‘ವಿಶ್ವ ಪರಿಸರ ದಿನ’ದ ಅಂಗವಾಗಿ ಪ್ರೌಢಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ “ನಮ್ಮನಡೆ ಪರಿಸರದೆಡೆಗೆ” “ಗೋ ಗ್ರೀನ್ ಅಭಿಯಾನ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಭವಿಷ್ಯದ ದೃಷ್ಟಿಯಿಂದ ಅರಣ್ಯ ಸಂರಕ್ಷಣೆಗಾಗಿ ನಾವು ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ನಾವು ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯ, ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಸುಂದರ ಪ್ರಕೃತಿ ತಾಣವಾದ ಕೊಡಗಿನ ಅರಣ್ಯ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
“ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರಕ್ಕೆ ಉಂಟಾಗುವ ದುಷ್ಪರಿಣಾಮಗಳು” ಕುರಿತು ಮಾಹಿತಿ ನೀಡಿದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲಾ ಅಂಗಳ ಮತ್ತು ಸುತ್ತಲಿನ ಪರಿಸರದಲ್ಲಿ ವರ್ಷದಲ್ಲಿ ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಅದನ್ನು ನಿರ್ವಹಣೆ ಮಾಡಿ ಪೋಷಿಸುವ ಗುರುತರ ಜವಾಬ್ದಾರಿ ಹೊಂದಬೇಕು. ಗಿಡನೆಟ್ಟು ಬೆಳೆಸುವ ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸುವ ಮೂಲಕ ಉತ್ತಮವಾಗಿ ಗಿಡ ಮರ ಬೆಳೆಸುವ ಮಕ್ಕಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಹೊಂದಬೇಕು ಎಂದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು. ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಸಂಪನ್ಮೂಲ ಶಿಕ್ಷಕರಾದ ಜಿ.ಶ್ರೀನಾಥ್, ಉ.ರಾ.ನಾಗೇಶ್, ಎಸ್.ಡಿ.ಎಂ.ಸಿ.ಸದಸ್ಯರಾದ ಜವರಯ್ಯ, ಎಂ.ರಂಗಸ್ವಾಮಿ, ಕೆ.ಎಸ್.ರಾಜಾಚಾರಿ, ಉಷಾ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಸಿ.ಆರ್.ಪಿ. ಕೆ.ಶಾಂತಕುಮಾರ್, ಸ್ವಯಂ ಸೇವಾ ಸಂಘಟನೆಯ ಪ್ರಮುಖರಾದ ಸುನಂದಕುಮಾರ್, ಎಚ್.ಸಿ.ಗೋವಿಂದರಾಜ್,ಅರಣ್ಯ ರಕ್ಷಕ ಮಂಜೇಗೌಡ ಇತರರು ಇದ್ದರು.
::: ಪ್ರತಿಜ್ಞೆ ಸ್ವೀಕಾರ :::
ಇದಕ್ಕೂ ಮುನ್ನ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕದ ಸಹಯೋಗದಲ್ಲಿ ಪರಿಸರ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತ ಭಿತ್ತಿಫಲಕಗಳನ್ನು ಹಿಡಿದು ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಮಾಲಿನ್ಯ ತಡೆಯಿರಿ, ಗಿಡನೆಟ್ಟು ಬೆಳೆಸೋಣ, ಪರಿಸರ ಸಂರಕ್ಷಿಸೋಣ ಬನ್ನಿ ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಪ್ರಚುರಪಡಿಸುವ ಮೂಲಕ ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಿದರು.








