ಮಡಿಕೇರಿ ಜೂ.27 : ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಯಮಬಾಹಿರವಾಗಿದೆ ಎಂದು ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅರುಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಮೊದಲು ಆಯ್ಕೆ ಮಾಡಬೇಕು. ನಂತರ ಸದಸ್ಯರುಗಳು ಅಧ್ಯಕ್ಷರನ್ನು ಆಯ್ಕೆ ಮಾಡುವ ನಿಯಮವಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಪಕ್ಷ ನಿಷ್ಠನಾದ ನನಗೆ ಅನ್ಯಾಯ ಮಾಡಿ ಅಧ್ಯಕ್ಷರ ಆಯ್ಕೆಯನ್ನು ಬಹಿರಂಗ ಪಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ನಗರಾಧ್ಯಕ್ಷ ಮನು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದ ಕಾರಣ ಕೆಲವು ಆಕಾಂಕ್ಷಿಗಳು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡುವಂತೆ ಸಲಹೆ ನೀಡಿದರು. ಆದರೆ ಇದಕ್ಕೆ ಪಕ್ಷದ ಜಿಲ್ಲಾ ವಕ್ತಾರ ಹಾಗೂ ನಗರಸಭಾ ಸದಸ್ಯ ಮಹೇಶ್ ಜೈನಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷದೊಳಗೆ ಮತದಾನ ಸರಿಯಲ್ಲವೆಂದು ತಿಳಿಸಿದರು.
ಸ್ಥಾಯಿ ಸಮಿತಿಯ ಈ ಹಿಂದಿನ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಅವರು ಸಭೆಗೆ ಗೈರು ಹಾಜರಾಗಿದ್ದ ಕಾರಣ ಇಲ್ಲಿನ ಆಯ್ಕೆ ಪ್ರಕ್ರಿಯೆ ಅಸಿಂಧು ಆಗುತ್ತದೆ ಎಂದು ನಾನು ವಿರೋಧ ವ್ಯಕ್ತಪಡಿಸಿದ್ದೆ. ಅಲ್ಲದೆ ನಾನೂ ಕೂಡ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವುದರಿoದ ನಿಯಮಾನುಸಾರ ನಗರಸಭಾ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯಾಗಲಿ ಎಂದು ಸಲಹೆ ನೀಡಿದೆ.
ಆದರೆ ನಿಯಮಗಳನ್ನು ಗಾಳಿಗೆ ತೂರಿ ನನ್ನ ಸಲಹೆಯನ್ನು ನಿರ್ಲಕ್ಷಿಸಿ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ನನ್ನ ತೀವ್ರ ವಿರೋಧವಿದೆ, ನಗರಸಭಾ ಸಾಮಾನ್ಯ ಸಭೆಯಲ್ಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಾಗಬೇಕು ಹೊರತು ಪಕ್ಷದ ಕಚೇರಿಯಲ್ಲಿ ಅಲ್ಲ ಎನ್ನುವ ಒತ್ತಾಯವಿದೆ ಎಂದು ಅರುಣ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ 30 ವರ್ಷಗಳಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದೇನೆ, ಇನ್ನು ಮುಂದೆಯೂ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ. ಆದರೆ ನಿಯಮಬಾಹಿರ ನಡೆಗಳಿಗೆ ನನ್ನ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.










