ನಾಪೋಕ್ಲು ಜೂ.27 : ಸ್ಥಳೀಯ ಪೊಲೀಸ್ ಠಾಣಾ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಾಪೋಕ್ಲುವಿನಲ್ಲಿ ಶಾಲಾ ಕಾಲೇಜು ಸಹಯೋಗದೊಂದಿಗೆ ಜನಜಾಗೃತಿ ಜಾಥ ನಡೆಯಿತು.
ಈ ಸಂದರ್ಭ ಸ್ಥಳೀಯ ಸರ್ಕಾರಿ ಪದವಿ ಕಾಲೇಜು ಹಾಗೂ ಕೆಪಿಎಸ್ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳು, ಬೋಧಕರು ಮತ್ತು ಪೊಲೀಸರು ಪಟ್ಟಣದ ಮುಖ್ಯ ಬೀದಿಯಲ್ಲಿ ಜಾತ ನಡೆಸಿ ಘೋಷಣೆಗಳನ್ನು ಕೂಗುದರ ಮೂಲಕ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.
ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಕಾವೇರಿ ಮಾತನಾಡಿ, ಯುವ ಪಿಳಿಗೆ ವಿವಿಧ ಮಾದಕ ವಸ್ತುಗಳ ಬಳಕೆ ಮಾಡುವುದರ ಮೂಲಕ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಮ್ಮೆಲ್ಲರದಾಗಿದ್ದು, ಸಮಾಜದ ಸ್ವಸ್ಥ ಕಾಪಾಡಬೇಕಾಗಿದೆ ಎಂದರು.
ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಮುಂದಾಳತ್ವದಲ್ಲಿ ಜರುಗಿದ ಜಾಥದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕೆಪಿಎಸ್ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು, ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬೋಧಕ ವರ್ಗ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








