ಮಡಿಕೇರಿ ಜೂ.27 : ನಗರದ ತ್ಯಾಗರಾಜನಗರದಲ್ಲಿರುವ ತಣಲ್ ವೃದ್ಧಾಶ್ರಮದ ನಡೆಯಲು ಅಶಕ್ತರಾದವರಿಗೆ ಆಸರೆ ಆಗುವಂತೆ ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಒಂದು ಗಾಲಿ ಕುರ್ಚಿಯನ್ನು ವಿತರಿಸಲಾಯಿತು.
ಗಾಲಿ ಕುರ್ಚಿ ಹಸ್ತಾಂತರ ದ ಮೂಲಕ ಒಕ್ಕೂಟದ ಅಡ್ಮಿನ್ ಅನಿಲ್ ರೈ ಕಾರ್ಯಕ್ರಮ ಉದ್ಘಾಟಿಸಿದರು.
ತಣಲ್ ಸಂಸ್ಥೆಯ ವಕ್ತಾರ, ಸ್ನೇಹಿತರ ಒಕ್ಕೂಟದ ಪ್ರತಿನಿಧಿ, ಮಹಮ್ಮದ್ ಮುಸ್ತಫ ಮಾತನಾಡಿ,
ಜೀವನದ ಇಳಿ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ನೊಂದು ಬೆಂದ ಸುಮಾರು 40 ಹಿರಿಯ ಬಡ ಜೀವಿಗಳು ತಣಲ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದು, ಅವರುಗಳಿಗೆ ತಣಲ್ ಸಂಸ್ಥೆಯಲ್ಲಿ ನೀಡುತ್ತಿರುವ ಸೇವೆಯ ಕುರಿತು ವಿವರಿಸಿ, ಸ್ನೇಹಿತರ ಒಕ್ಕೂಟದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಒಕ್ಕೂಟದ ಪ್ರತಿನಿಧಿ ಶಶಿಕುಮಾರ್ ಮಾತನಾಡಿ, ಸದ್ಯದಲ್ಲೇ ನಮ್ಮ ಒಕ್ಕೂಟದಿಂದ ತಣಲ್ ಸಂಸ್ಥೆಯ ಎಲ್ಲ ವಯೋವೃದ್ದರಿಗೆ ಸ್ವೆಟರ್ ಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಒಕ್ಕೂಟದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಸ್ಯರುಗಳು ಕೈಜೋಡಿಸುವಂತೆ ಕೋರಿದರು.
ಸ್ನೇಹಿತರ ಒಕ್ಕೂಟದ ಮತ್ತೋರ್ವ ಪ್ರತಿನಿಧಿ, ಮಾಜಿ ಯೋಧ ಡೇವಿಡ್ ವೇಗಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ನೇಹಿತರ ಒಕ್ಕೂಟವು ಬಡವರ ಸೇವಾ ಕಾರ್ಯದಲ್ಲಿ ಚುರುಕಾಗುತ್ತಿದ್ದು, ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರಶಂಶಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯಂತೆ ಆಗಲಿ ಎಂದು ಹಾರೈಸಿದರು.
ಒಕ್ಕೂಟದ ಅಡ್ಮಿನ್ ಗಾಯತ್ರಿ ನರಸಿಂಹ ,ಶಕ್ತಿ ವೃದ್ಧಾಶ್ರಮದ ಮುಖ್ಯಸ್ಥ ಸತೀಶ್ , ಕವಿ ಹಾ.ತಿ.ಜಯಪ್ರಕಾಶ್ ಮಾತನಾಡಿದರು.
ಒಕ್ಕೂಟದ ಅಡ್ಮಿನ್ ಎಂ.ಇ. ಮಹಮ್ಮದ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ಇದೇ ಸಂದರ್ಭ ತಣಲ್ ಸಂಸ್ಥೆಯ ಮುಖ್ಯಸ್ಥ ಮಹಮದ್ ಮುಸ್ತಫ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಒಕ್ಕೂಟದ ಪ್ರತಿನಿಧಿ ಕಡ್ಲೇರ ತುಳಸಿ ಮೋಹನ್ ಧ್ಯೇಯ ಗೀತೆ ಹಾಡಿದರು. ಅಡ್ಮಿನ್ ಪಿ.ಪಿ. ಸುಕುಮಾರ್ ಸ್ವಾಗತಿಸಿದರು. ಮತ್ತೋರ್ವ ಪ್ರತಿನಿಧಿ ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಅಡ್ಮಿನ್ ಮನ್ಸೂರ್ ಪರ್ಝ್ ಸರ್ವರನ್ನು ವಂದಿಸಿದರು.