ಮಡಿಕೇರಿ ಜು.4 : ಮೂರ್ನಾಡು ಚೆಸ್ಕಾಂ ವಿದ್ಯುತ್ ನಿಗಮದ ಕಿರಿಯ ಅಭಿಯಂತರರು ಹಾಗೂ ಲೈನ್‍ಮೆನ್ ಕಳೆದ ಒಂದು ವರ್ಷದಿಂದ ಮುತ್ತಾರ್ಮುಡಿ ಗ್ರಾಮದ ಮನೆಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಮುತ್ತಾರ್ಮುಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಮುತ್ತಾರ್ಮುಡಿ ಗ್ರಾಮಸ್ಥರ ಪರವಾಗಿ 54 ಗ್ರಾಮಸ್ಥರ ಸಹಿ ಸಹಿತ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರಾದ ತೆಕ್ಕಡೆ ಆರ್.ಸುನಂದ ಹಾಗೂ ಪಾರೆಮಜಲು ದಿನೇಶ್ ಗ್ರಾಮದ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಮೂರ್ನಾಡು ಪಟ್ಟಣದಿಂದ ಕೇವಲ 2ಕಿ.ಮೀ ಅಂತರದಲ್ಲಿರುವ ಮುತ್ತಾರ್ಮುಡಿ ಗ್ರಾಮಕ್ಕೆ ಮೂರ್ನಾಡಿನಿಂದ ಬರುವ ಕಂಬ ಮತ್ತು ವಿದ್ಯುತ್ ತಂತಿಗಳಿಗೆ ಅಡಚಣೆ ಆಗುವ ಮರದ ಕೊಂಬೆ, ರೆಂಬೆಗಳನ್ನು ಕತ್ತರಿಸದೆ ಜೋತು ಬಿದ್ದ ತಂತಿಗಳನ್ನು ಸರಿಪಡಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡಾಗÀ, ಕಂಬದಿಂದ ತಂತಿ ತುಂಡಾದಾಗ, ರಸ್ತೆ ಬದಿಯ ಕಂಬಕ್ಕೆ ವಾಹನಗಳು ಡಿಕ್ಕಿಯಾದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಚೆಸ್ಕಾಂ ಕಿರಿಯ ಅಭಿಯಂತರ ಹಾಗೂ ಲೈನ್‍ಮೆನ್ ಗ್ರಾಮಸ್ಥರ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಚೇರಿಗೆ ತೆರಳಿ ವಿದ್ಯುತ್ ಇಲ್ಲ ಎಂದು ಸಿಬ್ಬಂದಿಗಳಿಗೆ ಹೇಳಿದರೆ ಬೆಳಗ್ಗೆ 10 ಗಂಟೆಗೆ ವಿದ್ಯುತ್ ನೀಡಿ ಸಂಜೆ 6 ಗಂಟೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ಇಲ್ಲದೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಓದಲು, ಬರೆಯಲು ಸಾಧ್ಯವಾಗದೆ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ತೋಟದ ಕಾರ್ಮಿಕರು ಬೆಳಗ್ಗಿನ ಉಪಹಾರ ತಯಾರಿಸಲು ಸಾಧ್ಯವಾಗದೆ ತೋಟಗಳಲ್ಲಿ ನಿತ್ರಾಣಗೊಂಡು ಬಿದ್ದಿರುವ ಘಟನೆಗಳು ಕೂಡ ನಡೆದಿದೆ ಎಂದು ಸುನಂದ ಹಾಗೂ ದಿನೇಶ್ ಬೇಸರ ವ್ಯಕ್ತಪಡಿಸಿದರು.
ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮೂರ್ನಾಡು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.









