ಮಡಿಕೇರಿ ಜು.4 : ಮಡಿಕೇರಿಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ನಾಗರಿಕರು ಪರದಾಡುವಂತಾಗಿದ್ದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಲವರು ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ನಗರದಲ್ಲಿ ವಾಹನ ಪಾರ್ಕಿಂಗ್‍ಗೆ ಸ್ಥಳವಕಾಶಗಳಿಲ್ಲದೇ ಪೊಲೀಸ್ ಇಲಾಖೆಯವರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ ಎಂದರು.
ನಗರದ ಜನರಲ್ ತಿಮ್ಮಯ್ಯ ವೃತ್ತ ಮತ್ತು ನಗರಸಭೆ ಬಳಿ ಇರುವ ಸರ್ಕಲ್‍ಗಳಲ್ಲಿ ವಾಹನ ದಟ್ಟಣೆಯಿಂದ ಪೊಲೀಸ್ ಇಲಾಖೆಯವರಿಗೆ ತುಂಬಾ ಸಮಸ್ಯೆಯಾಗುತ್ತಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ವಾಹನಗಳನ್ನು ನಿಯಂತ್ರಿಸುವಂತಾಗಿದೆ. ಇಷ್ಟೆಲ್ಲ ಕೊಡಗಿಗಾಗಿ ಖರ್ಚು ಮಾಡುವ ಇಲಾಖೆಗಳು ಸಿಗ್ನಲ್ ಲೈಟ್ ಅಳವಡಿಸಲು ಮೀನ ಮೇಷ ಎಣಿಸಲು ಕಾರಣವೇನು ಎಂದು ಪ್ರಶ್ನಿಸಿದರು.
ನಗರದಲ್ಲಿ ಸಿಗ್ನಲ್ ಲೈಟ್ ಅಳವಡಿಸಲು ನಗರಸಭೆ, ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಹರೀಶ್ ಆಚಾರ್ಯ, ಪ್ರತಿ ಸರ್ಕಲ್‍ನಲ್ಲೂ ಮಳೆಯಿಂದ ರಕ್ಷಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಕಾಲೇಜು ರಸ್ತೆಗೆ ಸೇರುವಲ್ಲಿ ಸುಮಾರು 4 ವಾಹನಗಳು ಪಾರ್ಕ್ ಮಾಡುಷ್ಟು ಜಾಗವನ್ನು ಗುರುತಿಸಿರುತ್ತಾರೆ. ಇಲ್ಲಿ ಕೇವಲ ರಸ್ತೆ ಸೇರುವಲ್ಲಿ ಒಂದು ವಾಹನ ನಿಲ್ಲಿಸುವಷ್ಟು ಜಾಗಬಿಟ್ಟು ಬಾಕಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಬೇಕಾಗಿ ಹರೀಶ್ ಆಚಾರ್ಯ ಮನವಿ ಮಾಡಿದರು.









