ನಾಪೋಕ್ಲು ಜು.13 : ಭವಿಷ್ಯಕ್ಕಾಗಿ ನೀರು ಮತ್ತು ಜೀವ ವೈವಿಧ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಅರಣ್ಯ ಇಲಾಖೆಯ ಮುಂಡ್ರೋಟು ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಹೇಳಿದರು.
ಅರಣ್ಯ ಇಲಾಖೆಯ ಮುಂಡ್ರೋಟು ವಲಯ, ನಾಪೋಕ್ಲು ಲಯನ್ಸ್ ಕ್ಲಬ್, ಗ್ರಾಮ ಪಂಚಾಯಿತಿ ಬಲ್ಲಮಾವಟಿ ಸಂಯುಕ್ತ ಆಶಯದಲ್ಲಿ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವನಮಹೋತ್ಸವದ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವನಮಹೋತ್ಸವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ನಿಸರ್ಗಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು ಸೋಲಾರ್ ಬಳಸಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.
ನಾಪೋಕ್ಲು ಲಯನ್ಸ್ ಕ್ಲಬ್ ನ ಕಾರ್ಯ ಯೋಜನೆಗಳ ಆಯೋಜಕರಾದ ಎಂ.ಎಂ. ವಿನಯ್ ಮಾತನಾಡಿ ಕರ್ನಾಟಕ ಅರಣ್ಯ ಇಲಾಖೆ ವನ ಸಂಪತ್ತನ್ನು ವೃದ್ಧಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಎಲ್ಲರೂ ಸ್ಥಳೀಯ ಗಿಡಗಳನ್ನು ನೆಡುವುದರ ಮೂಲಕ ಇಲ್ಲಿನ ಪರಿಸರವನ್ನು ಸಂರಕ್ಷಿಸಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಗಿಡ ನೆಡುವುದು ಸೂಕ್ತವಲ್ಲ ಎಂದರು. ವಿದ್ಯಾರ್ಥಿಗಳು ಹುಟ್ಟು ಹಬ್ಬದ ನೆನಪಿಗಾಗಿ ತಲಾ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ನೇತಾಜಿ ವಿದ್ಯಾಸಂಸ್ಥೆಯ ಸಂಚಾಲಕ ನುಚ್ಚುಮಣಿಯಂಡ ಪಿ.ಚಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ, ನಿರ್ದೇಶಕರಾದ ವರುಣ್ ಸುಬ್ಬಯ್ಯ ಗಿರೀಶ್ ಮಾದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಉಪಾಧ್ಯಕ್ಷೆ ಬಾಳೆಯಡ ದೀನಾ ಮಾಯಮ್ಮ, ಬಾಬಿ ಭೀಮಯ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಕುಂಚೆಟ್ಟಿರ ಸುಧಿ ತಿಮ್ಮಯ್ಯ, ಖಜಾಂಚಿ ಎಂ.ಬಿ.ಕುಟ್ಟಪ್ಪ, ಸದಸ್ಯರಾದ ಮೇರಿ ಚಿಟ್ಟಿಯಪ್ಪ, ವಸಂತ ಮುತ್ತಪ್ಪ, ಗಸ್ತು ವನಪಾಲಕರಾದ ತಿಲಕ್, ರವಿಕುಮಾರ್ ಪಾಲ್ಗೊಂಡಿದ್ದರು ವನಮಹೋತ್ಸವದ ಅಂಗವಾಗಿ ಶಾಲಾ ಪರಿಸರದಲ್ಲಿ 25 ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.
ವರದಿ : ದುಗ್ಗಳ ಸದಾನಂದ