ನಾಪೋಕ್ಲು ಜು.13 : ಮರಂದೋಡು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳು ಅನ್ನಾಡಿಯಂಡ ದಿಲೀಪ್ ಅವರ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ನಷ್ಟ ಉಂಟುಮಾಡಿವೆ.
ಮರಂದೋಡು ಗ್ರಾಮದಲ್ಲಿ ಕಾಡಾನೆಗಳ ಉಪಟಳ ದಿಂದ ಗ್ರಾಮಸ್ಥರು ನಲುಗುವಂತಾಗಿದ್ದು, ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಧ್ವಂಸ ಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದೀಗ ಮತ್ತೆ ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಬಾಳೆ ಗಿಡಗಳನ್ನು ದ್ವಂಸಪಡಿಸಿ ರಸ್ತೆಗಳಲ್ಲಿ ಎಳೆದೊಯ್ದಿರುವ ದೃಶ್ಯಗಳು ಕಂಡುಬಂದಿವೆ.
ಹಲಸು, ಕಾಫಿ, ಬಾಳೆ ಮತ್ತಿತರ ಕೃಷಿ ವಸ್ತುಗಳನ್ನು ಕಾಡಾನೆಗಳು ಧ್ವಂಸ ಮಾಡಿದ್ದು ಮಂಗಳವಾರ ರಾತ್ರಿ ಮನೆಯಂಗಳಕ್ಕೆ ಬಂದಿರುವುದರಿಂದ ಜೀವ ಭಯವಾಗುತ್ತಿದೆ ಎಂದು ಕೃಷಿಕ ಅನ್ನಾಡಿಯಂಡ ದಿಲೀಪ್ ಕುಮಾರ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಶಾಶ್ವತವಾಗಿ ಆನೆಗಳನ್ನು ಸ್ಥಳಾಂತರಿಸಲು ಸಂಬಂಧಿಸಿದವರು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕಾಡಾನೆ ಉಪಟಳದಿಂದ ಕಂಗೆಟ್ಟ ಕೋಕೇರಿ, ಮರಂದೋಡ, ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಕಳೆದ ಸೋಮವಾರ ಚೆಯ್ಯಂಡಾಣೆಯಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದ್ದರು.
ವರದಿ : ದುಗ್ಗಳ ಸದಾನಂದ