ಮಡಿಕೇರಿ ಆ.14 : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಆ.15 ರವರೆಗೆ ಎಲ್ಲರ ಮನೆ ಮನೆಗಳ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸುವಂತಾಗಬೇಕು ಎಂದು ಜಿಲ್ಲಾಡಳಿತ ಕೋರಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ಯಮಗಳು, ಸಾರ್ವಜನಿಕ ಸ್ಥಳಗಳು, ಸಂಘ ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವುದು ಸೇರಿದಂತೆ ಸಾರ್ವಜನಿಕರು ಸಹ ಸ್ವಯಂ ಪ್ರೇರಿತವಾಗಿ ಭಾಗವಹಿಸಿ, ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ಕೋರಿದೆ.
ಎಲ್ಲರ ಮನೆ ಮನೆಗಳ ಮೇಲೆ, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಜಿಲ್ಲಾ ಕಚೇರಿಗಳಲ್ಲಿ ಧ್ವಜ ಶಿಷ್ಟಚಾರವನ್ನು ಪಾಲನೆ ಮಾಡಿ, ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ರಾಷ್ಟ್ರಧ್ವಜ ಹಾರಿಸಬೇಕು.
ಅಭಿಯಾನದಲ್ಲಿ ಪಾಲ್ಗೊಂಡಿರುವ ಕುರಿತು ಸಾರ್ವಜನಿಕರು ಆ.15 ರಂದು #har-ghar-tiranga ಹ್ಯಾಶಟ್ಯಾಗ್ದೊಂದಿಗೆ harghartiranga.com ನಲ್ಲಿ ಅಪ್ಲೋಡ್ ಮಾಡಲು ಜಿಲ್ಲಾಡಳಿತ ಕೋರಿದೆ.