ನಾಪೋಕ್ಲು ಆ.30 : ನಾಲ್ಕುನಾಡು ವ್ಯಾಪ್ತಿಯಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಭತ್ತದ ನಾಟಿ ಕಾರ್ಯದ ಬಳಿಕ ಬರುವ ಈ ’ಕೈಲ್ ಪೊಲ್ದ್’ ಹಬ್ಬ ಎನ್ನುವುದು ಕೊಡಗಿನ ರೈತಾಪಿ ವರ್ಗದಿಂದ ಆಚರಿಸಲ್ಪಡುವ ಆಯುಧ ಪೂಜೆಯೇ ಆಗಿದೆ. ಈ ಹಬ್ಬದಂದು ಆಯುಧಗಳಾದ ಕೋವಿ, ಕತ್ತಿ, ಕೃಷಿಯುಪಕರಣಗಳಿಗೆ ಕುಟುಂಬಸ್ಥರೆಲ್ಲ ಒಗ್ಗೂಡಿ ಪೂಜೆ ಸಲ್ಲಿಸಿ, ಮಾಂಸಾಹಾರವನ್ನು ಸೇವಿಸಿ ಸಂಭ್ರಮಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಕೊಡವ ಬಾಂಧವರು ತಮ್ಮ ಐನ್‍ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ ಆಚರಿಸಿದರು. ಕುಟುಂಬದ ಹಿರಿಯರು, ಪುರುಷರು, ಮಹಿಳೆಯರು ಹಾಗು ಮಕ್ಕಳೆಲ್ಲ ಐನ್‍ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು. ಕೊಡವರ ಸಾಂಪ್ರದಾಯಿಕ ಆಯುಧಗಳಾದ ಕೋವಿ, ಒಡಿಕತ್ತಿ ಹಾಗು ಹಲವು ಆಯುಧಗಳನ್ನಿರಿಸಿ ತೋಕ್‍ಪೂ(ಗೌರಿ ಹೂ)ಗಳಿಂದ ಅಲಂಕರಿಸಿ, ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಖಾದ್ಯವನ್ನು ಇಟ್ಟು ಪೂಜೆ ಸಲ್ಲಿಸಿದರು.
ಹಬ್ಬದೂಟದ ಬಳಿಕ ಹಿರಿಯರು ತೆಂಗಿಕಾಯಿಗೆ ಗುಂಡು ಹೊಡೆದ ನಂತರ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಐನ್‍ಮನೆಯ ಮುಂದಿನ ಹಟ್ಟಿಯಲ್ಲಿ ತೆಂಗಿನಕಾಯಿಗೆ ಗುಂಡುಹೊಡೆದು ಸಂಭ್ರಮಿಸಿದರು.
ಕೈಲ್ ಪೊಳ್ದ್ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ.
ಗಾಳಿಬೀಡು ವಿಭಾಗದಲ್ಲಿ ಮೊದಲು ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ನಾಲ್ಕು ನಾಡಿನಲ್ಲಿ ಆಗಷ್ಟ್ ತಿಂಗಳ 28-29 ರಂದು ನಡೆಯುತ್ತದೆ. ಕೊಡಗಿನಾದ್ಯಂತ ಸೆ.3 ರಂದು ಹಬ್ಬವನ್ನು ಆಚರಿಸುತ್ತಾರೆ.
ವರದಿ : ದುಗ್ಗಳ ಸದಾನಂದ