ಮಡಿಕೇರಿ ಆ.31 : ಮಕ್ಕಳ ಹಲ್ಲುಗಳಿಗೆ ಪ್ರಾಥಮಿಕ ಅಥವಾ ಹಾಲು ಹಲ್ಲು ಎಂದು ಕರೆಯುತ್ತೇವೆ. ಈ ಹಲ್ಲುಗಳು ಮಗುವಿಗೆ ಒಂದರಿಂದ ಮೂರು ವರ್ಷ ವಯಸ್ಸಿನ ನಡುವೆ ಒಸಡಿನಲ್ಲಿ ಮೂಡುತ್ತವೆ ಹಾಗೂ ಹನ್ನೆರಡು ವರ್ಷ ಪ್ರಾಯದ ವರೆಗೆ ಇರುತ್ತವೆ. ಸಾಮಾನ್ಯವಾಗಿ ಈ ಹಲ್ಲುಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ಬಹಳ ಜನರು ನಂಬಿದ್ದಾರೆ. ಆದರೆ ಈ ಹಲ್ಲುಗಳು ಮಕ್ಕಳ ದವಡೆಯ ಹಾಗೂ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹಾಲು ಹಲ್ಲಿನ ಎರಡು ಪ್ರಮುಖ ಪ್ರಯೋಜನಗಳು:
೧. ಆಹಾರ ಜಗಿಯುವಿಕೆ: ನಾವು ಸೇವಿಸುವ ಆಹಾರವನ್ನು ಹಲ್ಲುಗಳು ಚೆನ್ನಾಗಿ ಜಗಿದರೆ ಮಾತ್ರ ಅವುಗಳಲ್ಲಿರುವ ಪುಷ್ಟಿಕಾಂಶವು ನಮ್ಮ ದೇಹಕ್ಕೆ ದೊರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಳೆಯುವ ಮಕ್ಕಳ ಹಲ್ಲುಗಳು ಅವರ ದೇಹದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
೨. ಶಾಶ್ವತ ಹಲ್ಲುಗಳ ಸ್ಥಳಾವಕಾಶ: ಶಾಶ್ವತ ಹಲ್ಲುಗಳು ಮಕ್ಕಳ ದವಡೆಯಲ್ಲಿ ಮೂಡುವವರೆಗೆ ಹಾಲು ಹಲ್ಲುಗಳು ಶಾಶ್ವತ ಹಲ್ಲುಗಳಿಗೆ ಬೇಕಾದ ಸ್ಥಳವನ್ನು ರೂಪಿಸಿಕೊಡುತ್ತವೆ. ಆದ್ದರಿಂದ ಶಾಶ್ವತ ಹಲ್ಲುಗಳು ಬರುವವರೆಗೆ ಹಾಲು ಹಲ್ಲುಗಳು ಇರಬೇಕು.
ಮಕ್ಕಳ ಹಲ್ಲುಗಳು ಬಹು ಬೇಗ ಹುಳುಕಾಗುತ್ತವೆ. ಆದ್ದರಿಂದ ಮೂರು ಅಥವಾ ಆರು ತಿಂಗಳಿಗೊಮ್ಮೆ ದಂತ ವೈದ್ಯರಿಗೆ ತೋರಿಸಬೇಕು.
ವಿಶೇಷ ವರದಿ: ಡಾ.ಆಮ್ಮಂಡ ಚಿಣ್ಣಪ್ಪ,
ಕ್ಷೇಮ ಡೆಂಟಲ್, ಗೋಣಿಕೊಪ್ಪಲು
ದೂರವಾಣಿ ಸಂಖ್ಯೆ : 79750 36597