ಕುಶಾಲನಗರ ಸೆ.3 : ಕುಶಾಲನಗರ ಗ್ರಾಹಕರ ವೇದಿಕೆ, ರೋಟರಿ ಕುಶಾಲನಗರ ಮತ್ತು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಈ ತಿಂಗಳ 4ರಂದು ಕುಶಾಲನಗರದಲ್ಲಿ ವಿದ್ಯುತ್ ಬಳಕೆದಾರರ ಸಭೆಯನ್ನು ಕರೆಯಲಾಗಿದೆ ಎಂದು ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಚಂಗಪ್ಪ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಕುಶಾಲನಗರದ ಎ ಪಿ ಸಿ ಎಂ ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಅಂದು ಸಂಜೆ 4 ಗಂಟೆಗೆ ನಡೆಯುವ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ವೇಣುಗೋಪಾಲ್ ಭಟ್ ಮತ್ತು ಕರ್ನಾಟಕ ರಾಜ್ಯ ವಿದ್ಯುತ್ ಬಳಕೆದಾರರ ಸಂಘದ ಉಪಾಧ್ಯಕ್ಷರಾದ ಎಂ ರಂಗನಾಥ್ ಅವರು ಪಾಲ್ಗೊಂಡು ವಿಶೇಷ ಮಾಹಿತಿಯನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಶುಲ್ಕದಲ್ಲಿ ಅತಿಯಾದ ಹೆಚ್ಚಳ, ಅಸಮರ್ಪಕ ಸೇವೆ ಹಾಗೂ ಕುಂದು ಕೊರತೆಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದರು. ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ರವೀಂದ್ರ ರೈ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೂ.10 ನಾಣ್ಯ ಚಲಾವಣೆ ಸಂದರ್ಭ ನಾಗರಿಕರು ಸಮಸ್ಯೆಗೆ ಒಳಗಾಗುತ್ತಿದ್ದು ಯಾವುದೇ ಸಂದರ್ಭ ವ್ಯಾಪಾರಿಗಳು ಅಥವಾ ಇತರರು ರೂ.10 ನಾಣ್ಯವನ್ನು ಪಡೆಯಲು ಹಿಂಜರಿಯಬಾರದು ಎಂದು ಕೋರಿದರು.
10 ರೂ ನಾಣ್ಯವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಷೇಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ರವೀಂದ್ರ ರೈ ವ್ಯಾಪಾರಿಗಳು 10 ರೂ ನಾಣ್ಯವನ್ನು ತಮ್ಮ ಅಂಗಡಿಗಳಲ್ಲಿ ಸ್ವೀಕರಿಸುವಂತಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ರೋಟರಿ ಅಧ್ಯಕ್ಷರಾದ ಸುನೀತಾ ಮಹೇಶ್, ರೋಟರಿ ನಿರ್ದೇಶಕರಾದ ಮಹೇಶ್ ನಾಲ್ವಡೆ ಇದ್ದರು.