ಮಡಿಕೇರಿ ಸೆ.9 : ವನ್ಯಜೀವಿಗಳಿಂದ ಜೀವ ಕಳೆದುಕೊಂಡವರಿಗೆ ಕೊಡಗು ರೈತ ಸಂಘ, ಕಾರ್ಮಿಕ ಸಂಘಟನೆ ಮತ್ತು ಆದಿವಾಸಿಗಳು ಒಗ್ಗೂಡಿ ಸೆ.11 ರಂದು ಗೌರವ ಸಲ್ಲಿಸುವ ಮೂಲಕ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಪ್ರಕೃತಿಯನ್ನು ಪೂಜಿಸುತ್ತಾ, ಕಾಡ್ಗಿಚ್ಚನ್ನು ನಿಯಂತ್ರಿಸುತ್ತಾ ಅರಣ್ಯ ಹಾಗೂ ಪರಿಸರವನ್ನು ರಕ್ಷಿಸುತ್ತಾ ಬಂದು ಕಾಡುಪ್ರಾಣಿಗಳ ದಾಳಿಯಿಂದ ಮೃತರಾದ ಆದಿವಾಸಿಗಳು, ಬುಡಕಟ್ಟು ಜನಾಂಗದವರು, ರೈತರು, ಕಾರ್ಮಿಕರು, ಗ್ರಾಮವಾಸಿಗಳನ್ನು ಕೂಡ ಹುತಾತ್ಮರೆಂದು ಪರಿಗಣಿಸಬೇಕು. ಸರ್ಕಾರ ಅರಣ್ಯ ಸಿಬ್ಬಂದಿಗಳನ್ನು ಮಾತ್ರ ಹುತಾತ್ಮರು ಎಂದು ಪರಿಗಣಿಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು.
ಸೆ.11 ರಂದು ನಡೆಯುವ ಅರಣ್ಯ ಹುತಾತ್ಮರ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಅಂದು ಅರಣ್ಯ ಭವನದಲ್ಲಿ ಕೊಡಗು ರೈತ ಸಂಘ, ಕಾರ್ಮಿಕ ಸಂಘಟನೆ ಹಾಗೂ ಆದಿವಾಸಿಗಳು ಒಗ್ಗೂಡಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರೆಲ್ಲರೂ ಹುತಾತ್ಮರೆಂದು ಪರಿಗಣಿಸಿ ಪುಷ್ಪ ನಮನ ಸಲ್ಲಿಸಿಸಲಾಗುವುದು ಎಂದರು.
ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ಅನೇಕ ಕಾರ್ಮಿಕರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಯಾವುದೇ ತಪ್ಪು ಮಾಡದೆ ವನ್ಯಜೀವಿ ದಾಳಿಯಿಂದ ಮೃತಪಟ್ಟಿದ್ದಾರೆ. 15 ಲಕ್ಷ ರೂ. ಪರಿಹಾರದಿಂದ ಮೃತರ ಕುಟುಂಬದ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮತ್ತು ಪುನರ್ವಸತಿ ಕಲ್ಪಿಸಬೇಕು. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಪಿ.ಆರ್.ಭರತ್ ಕುಮಾರ್ ಮಾತನಾಡಿ, ಸರ್ಕಾರದ ವೈಫಲ್ಯದಿಂದಾಗಿ ಕಾಡಿನಲ್ಲಿರಬೇಕಾದ ವನ್ಯಜೀವಿಗಳು ನಾಡಿಗೆ ಬಂದು ದಾಳಿ ನಡೆಸುತ್ತಿವೆ. ಇದರಿಂದ ಕಾರ್ಮಿಕರು, ಆದಿವಾಸಿಗಳು, ಬುಡಕಟ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವರನ್ನು ಕೂಡ ಹುತಾತ್ಮರು ಎಂದು ಪರಿಗಣಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ ಹಾಗೂ ಆದಿವಾಸಿ ಮುಖಂಡ ರಾಮು ಉಪಸ್ಥಿತರಿದ್ದರು.









