ಮಡಿಕೇರಿ ಸೆ.13 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜನ್ಮದಿನವಾದ ಸೆ.15 ರಂದು ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಿಂದ (ತಾವುನಾಡ್) ಪಾದಯಾತ್ರೆ ಆರಂಭಿಸಲಾಗುವುದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ವಿವಿಧೆಡೆ ಐದು ಹಂತಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ತಲಕಾವೇರಿಯಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಯೋಗಕ್ಷೇಮಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಬೇಡಿಕೆ ಪರ ಪ್ರಾರ್ಥನೆ ಸಲ್ಲಿಸಿ 9ಗಂಟೆಗೆ ಪಾದಯಾತ್ರೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಮೊದಲ ಹಂತದಲ್ಲಿ ಸೆ.15 ರಂದು ತಾವುನಾಡ್, ದೇಶ ಮಂದ್ (ತಲಕಾವೇರಿ- ಭಾಗಮಂಡಲ-ಪುಲಿಕೋಟ್) 10.00 ಗಂಟೆಗೆ ಬಲ್ಲತ್‍ನಾಡ್ (ಬಲ್ಲಮಾವಟಿ) 2.30 ಗಂಟೆಗೆ ಬೆಂಗ್‍ನಾಡ್ (ಚೇರಂಬಾಣೆ) (ಮಡಿಕೇರಿ ತಾಲೂಕು) ಮೂಲಕ ಹಾದುಹೋಗುತ್ತದೆ. ಸೆ.16 ರಂದು ಬೆಳಗ್ಗೆ 9.30 ಗಂಟೆಗೆ ಕುಯ್ಯಂಗೇರಿನಾಡ್ “ಚೋರಂಗೆ ಮಾನಿ ಮಂದ್” ನಲ್ಲಿ (ಹೊದ್ದೂರು, ಪೊದ್ದ್, ಬೆಟ್ಟಗೇರಿ-ಪಾಲೂರ್), ಮಧ್ಯಾಹ್ನ 12 ಗಂಟೆಗೆ ಕಗ್ಗೋಡ್ ನಾಡ್ (ಕಗ್ಗೋಡ್-ಬಿಳಿಗೇರಿ-ಹಾಕತ್ತೂರು) 3:30 ಗಂಟೆಗೆ ಮಡಿಕೇರಿ ನಾಡ್ (ಮಡಿಕೇರಿ ನಗರ) (ಮಡಿಕೇರಿ ತಾಲೂಕು),
ಸೆ.17 ರಂದು ಬೆಳಗ್ಗೆ 9.30 ಗಂಟೆಗೆ ಮುತ್ತ್ ನಾಡ್ (ಕಾಲೂರ್), ಮಧ್ಯಾಹ್ನ 12 ಗಂಟೆಗೆ ಬದಿಗೇರಿನಾಡ್ (ಮುಕ್ಕೋಡ್ಲ್) (ಮಡಿಕೇರಿ ತಾಲೂಕು), ಸೆ.18 ರಂದು ಬೆಳಗ್ಗೆ 10 ಗಂಟೆಗೆ ಸೂರ್ಲಬಿನಾಡ್ (ಸೂರ್ಲಬ್ಬಿ), ಮಧ್ಯಾಹ್ನ 2.30 ಗಂಟೆಗೆ ಗಡಿನಾಡ್ (ಬಿಳಿಗೇರಿ-ಮಾದಾಪುರ) (ಸೋಮವಾರಪೇಟೆ ತಾಲೂಕು), ಸೆ.19 ರಂದು ಬೆಳಗ್ಗೆ 10 ಗಂಟೆಗೆ ಪಾಲೇರಿನಾಡ್ (ಪಾಲೇರಿ-ಮಕ್ಕಂದೂರ್) (ಮಡಿಕೇರಿ ತಾಲೂಕು) ಯಾತ್ರೆಯೂ 4.30 ಗಂಟೆಗೆ ಮೂಡಗೇರಿ ನಾಡ್ (ಕೆದಕಲ್) ನಲ್ಲಿ ಕೊನೆಗೊಳ್ಳುತ್ತದೆ.
ಎರಡನೇ ಹಂತದ ಯಾತ್ರೆಯಲ್ಲಿ ಸೆ.27 ರಂದು ಬೆಳಗ್ಗೆ 9 ಗಂಟೆಗೆ ಮತ್ತೆ ಮಡಿಕೇರಿ ತಾಲೂಕು “ಪೊರೆನಾಲ್‍ನಾಡ್’+’ನೂರೊಕ್ಕನಾಡ್’ “ಕುರುಳಿ ಅಂಬಲ” ಮಂದ್ ನಿಂದ ಪುನರಾರಂಭಗೊಂಡು ನೆಲ್ಲಿಯಪುದಿಕೇರಿನಾಡ್ ಮಧ್ಯಾಹ್ನ 12 ಗಂಟೆಗೆ ಕಟ್ಟೆಮಾಡ್, 3.30 ಗಂಟೆಗೆ ಅರೆಕಾಡ್ ಮಂದ್‍ನಲ್ಲಿ ಕಾರ್ಯಕ್ರಮ, ಸೆ.28 ರಂದು ಬೆಳಗ್ಗೆ 10ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್-ಐಕೊಳ) (ಮಡಿಕೇರಿ ತಾಲೂಕು) ಮಧ್ಯಾಹ್ನ 3 ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ 5.30 ಗಂಟೆಗೆ ಚೆಂಬೆಬೆಳಿಯೂರ್ (ವಿರಾಜಪೇಟೆ ತಾಲೂಕು), ಸೆ.29 ರಂದು ಬೆಳಗ್ಗೆ 10 ಗಂಟೆಗೆ ಎಡೆನಾಲ್‍ನಾಡ್ (ಮಗ್ಗುಲ), 2 ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದ (ವಿರಾಜಪೇಟೆ ತಾಲೂಕು)ದಲ್ಲಿ ನಡೆಯಲಿದೆ.
ಮೂರನೇ ಹಂತದಲ್ಲಿ ಅ.7 ರಂದು ಬೆಳಗ್ಗೆ 10.00 ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ), 3.00 ಗಂಟೆಗೆ ಅರ್ಕೇರಿನಾಡ್ (ಬಾಳೆಲೆ) (ಪೊನ್ನಂಪೇಟೆ ತಾಲೂಕು), ಅ.8 ರಂದು ಬೆಳಗ್ಗೆ 10 ಗಂಟೆಗೆ ಕಿರ್ನಾಲ್‍ನಾಡ್ (ಕಿರ್ಗೂರ್-ಬೆಸಗೂರ್), 3 ಗಂಟೆಗೆ ಪತ್ತ್ ಕಟ್‍ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) (ಪೊನ್ನಂಪೇಟೆ ತಾಲೂಕು), ಅ.9 ರಂದು ಬೆಳಗ್ಗೆ 10 ಗಂಟೆಗೆ ತೊಡನಾಡ್ (ಕುಮಟೂರ್-ಶ್ರೀಮಂಗಲ), 2:30 ಗಂಟೆಗೆ, ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು), ಅ.10 ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‍ಗಳಲ್ಲಿ ಸಭೆ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು), ಅ.11 ರಂದು ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), 02.30 ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ನಡೆಯಲಿದೆ.
ನಾಲ್ಕನೇ ಹಂತದಲ್ಲಿ ಅ.20ರಂದು ಬೊಟ್ಟಿಯತ್‍ನಾಡ್ (ಕುಂದ), ಕುತ್‍ನಾಡ್ (ಬಿ.ಶೆಟ್ಟಿಗೇರಿ), ಬೆರಳಿನಾಡ್ (ಕಂಡಂಗಾಲ) ಈ ಮೂರು ನಾಡುಗಳ ಸಭೆಯು ಬೆಳಗ್ಗೆ 10.30 ಗಂಟೆಗೆ “ಕೈಮುಡಿಕೆ ಮಂದ್” ನಲ್ಲಿ ನಡೆಯಲಿದೆ.
ಅ.21 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಿಬಾಣೆ ಮಂದ್ ಪೆರವನಾಡ್ (ಬುಟ್ಟಂಗಾಲ), ಮಧ್ಯಾಹ್ನ 2.30 ಗಂಟೆಗೆ ಬೋಟೋಳಿನಾಡ್ (ಆರ್ಜಿ ಬೊಟೋಳಿ, (ವಿರಾಜಪೇಟೆ ತಾಲೂಕು) ಸಭೆಯನ್ನು ಆಯೋಜಿಸಲಾಗಿದೆ.
ಐದನೇ ಹಂತದಲ್ಲಿ ನ.7 ಬೆಳಗ್ಗೆ 10.00 ಗಂಟೆಗೆ ಬೆಪ್ಪುನಾಡ್’ ನ ಅರಮೇರಿ ಮಂದ್‍ನಲ್ಲಿ, 2.30 ಗಂಟೆಗೆ ಕಡಂಗ ಮುರೂರು ಮಂದ್‍ನಲ್ಲಿ (ವಿರಾಜಪೇಟೆ ತಾಲೂಕು), ನ.8ರಂದು ಬೆಳಗ್ಗೆ 10 ಗಂಟೆಗೆ ಕಡಿಯತ್‍ನಾಡ್ ನ ಕರಡದ “ಬೇಲಿಯಾಣೆ ಮಂದ್” ನಲ್ಲಿ, 2.30 ಗಂಟೆಗೆ ಬಲಂಬೇರಿ ಮಂದ್ ನಲ್ಲಿ ನಡೆಯಲಿದೆ.
ನ.9 ರಂದು ಬೆಳಗ್ಗೆ 10 ಗಂಟೆಗೆ ನೂರಂಬಡನಾಡ್ ಮಂದ್, ಸಂಜೆ 4.30 ಗಂಟೆಗೆ ನೆಲಜಿನಾಡ್ ಮಂದ್ (ನೆಲಜಿ) (ಮಡಿಕೇರಿ ತಾಲೂಕು), ನ.10 ರಂದು ಬೆಳಗ್ಗೆ 9 ಗಂಟೆಗೆ ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ ಯಾತ್ರೆಯು ಮಧ್ಯಾಹ್ನ 12 ಗಂಟೆಗೆ “ಕೆಂಜರಾಣೆ ಪಾಡಿನಾಡ್‍ಮಂದ್’ನಲ್ಲಿ (ಕುಂಜಿಲ- ಕಕ್ಕಬ್ಬೆ) (ಮಡಿಕೇರಿ ತಾಲೂಕು) ಸಮಾರೋಪಗೊಳ್ಳಲಿದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.
ಸಿಎನ್‍ಸಿಯ 9 ಬೇಡಿಕೆಗಳ ಕುರಿತು ಪಾದಯಾತ್ರೆ ಸಂದರ್ಭ ಜನಜಾಗೃತಿ ಮೂಡಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಕೊಡವರ ಸ್ವಯಂ ಶಾಸನದ ಜನ್ಮ ಭೂಮಿಯನ್ನು ಕಾಯ್ದೆ ಬದ್ದವಾಗಿ ಸ್ಥಿರೀಕರಣಗೊಳಿಸಲು ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು ಸಂವಿಧಾನದ ವಿಧಿ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದ ಸ್ವಾಧೀನದೊಳಗೆ ಆಂತರಿಕ-ರಾಜಕೀಯ ಸ್ವ- ನಿರ್ಣಯದ ಹಕ್ಕನ್ನು ಕೊಡವರಿಗೆ ಸಂಯೋಜಿಸುವ ಮೂಲಕ ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು.
ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
. ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು.
ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸುವುದು. ನಮ್ಮ ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪುಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳಬೇಕು, ಕಾವೇರಿ ನೀರಿನ 740 ಟಿಎಂಸಿ ವಾರ್ಷಿಕ ಇಳುವರಿಯಲ್ಲಿ, ಕೊಡವ ನೆಲದ ಪಾಲು 200 ಟಿಎಂಸಿ ಗಿಂತ ಹೆಚ್ಚು ಆಗಿದೆ.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ (ಯು.ಎನ್.ಓ) ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ದೇವಾಟ್ ಪರಂಟ್ ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ಕೊಡವ ಜನಾಂಗದ ದೇಶ ಮಂದ್ ಆಗಿದೆ. ಪ್ರಾಚೀನ ಯುದ್ಧಭೂಮಿಗಳಾದ ಕುರುಕ್ಷೇತ್ರ, ಕಳಿಂಗ ಮತ್ತು ವಾಟರ್ಲ್ಲೂ ಗಳನ್ನು ಪಾರಂಪರಿಕ ತಾಣಗಳಾಗಿ ರಕ್ಷಿಸಿದ ಪರಿಯಲ್ಲೇ ಅವುಗಳಿಗೆ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು.
ಜನಸಂಖ್ಯಾ ಬದಲಾವಣೆಯನ್ನು/ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಮುದಾಯ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ ಪಾರಮಾರ್ಥಿಕ ನೆಲೆಗಳಾದ ಮಂದ್, ದೇವಕಾಡ್, ತೂಟ್‍ಂಗಲ, ಕ್ಯಾಕೊಳ ಗಳನ್ನು ರಕ್ಷಿಸಬೇಕು. ಕೊಡವರ ಜನ್ಮ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ ಲೈನ್ ಪರ್ಮಿಟ್ ಅನ್ನು ನೀಡಬೇಕು.
ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು. ಕೇಂದ್ರ ವಿಸ್ತಾ” 9 ಡಿಸೆಂಬರ್ 1946 ರಿಂದ 24 ಜನವರಿ 1950 ರವರೆಗೆ, ಕೊಡವ ಜನಾಂಗದ ಸದಸ್ಯರು ಭಾರತದ ಸಂವಿಧಾನ ಸಭೆಯಲ್ಲಿ ಕೂರ್ಗ್/ ಕೊಡವ ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು ಎಂದು ನಾಚಪ್ಪ ಪ್ರತಿಪಾದಿಸಿದ್ದಾರೆ.







