ಕುಶಾಲನಗರ/ಕೂಡಿಗೆ, ಸೆ.23 : ಓಝೋನ್ ಪದರದ ರಕ್ಷಣೆ ನಮ್ಮೆಲ್ಲರ ಹೊಣೆ, ಮಾನವರಿಗೆ ಪರಿಸರ ಬಹಳ ಮುಖ್ಯ ಆದರೆ ಪರಿಸರಕ್ಕೆ ಮಾನವರು ಮುಖ್ಯವಲ್ಲ, ಇದನ್ನು ಅರಿತು ಪ್ರತಿಯೊಬ್ಬರೂ ಓಝೋನ್ ಪದರದ ರಕ್ಷಣೆಗೆ ಮುಂದಾಗಬೇಕೆಂದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು.
ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಛೇರಿ ಮತ್ತು ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ
“ವಿಶ್ವ ಓಝೋನ್ ಪದರ ಸಂರಕ್ಷಣಾ ದಿನಾಚರಣೆ” ಕಾರ್ಯಕ್ರಮದಲ್ಲಿ ಓಝೋನ್ ರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಜೀವಸಂಕುಲದ ಉಳಿವಿಗೆ ಓಝೋನ್ ಪದರವನ್ನು ರಕ್ಷಿಸಲು ಪಣ ತೊಡಬೇಕಾಗಿದೆ ಎಂದರು.
ಓಝೋನ್ ಪದರದ ಸಂರಕ್ಷಣೆ ಸಂಪೂರ್ಣ ಮನು ಕುಲದ ಹೊಣೆಗಾರಿಕೆ ಯಾಗಿದೆ. ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಈ ಭೂಮಂಡಲವನ್ನು ಜತನ ದಿಂದ ರಕ್ಷಿಸಿ ಬಳುವಳಿ ಯಾಗಿ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಕೂಡ. ಇದಕ್ಕಾಗಿ ನಾವೆಲ್ಲರೂ ಸಂಕಲ್ಪ ತೊಡಬೇಕಾಗಿದೆ ಎಂದರು.
ವಾಯುಮಂಡಲದಲ್ಲಿರುವ “ಓಝೋನ್ ಪದರ’ ಭೂಮಿಯಲ್ಲಿನ ಸಕಲ ಜೀವರಾಶಿಗಳ ಸಂರಕ್ಷಕ ಎಂದೇ ಕರೆಯಲ್ಪಡುತ್ತದೆ. ನಾವು ಪರಿಸರದಲ್ಲಿ ಮಾಲಿನ್ಯ ಉಂಟು ಮಾಡದೇ ಪರಿಸರ ಸ್ನೇಹಿಯಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ ಓಜೋನ್ ಪದರದ ರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಪ್ರೇಮಕುಮಾರ್ ತಿಳಿಸಿದರು.
ಓಝೋನ್ ಪದರ ಹಾನಿಯಾದಲ್ಲಿ ಮಾನವ ಸೇರಿದಂತೆ ಎಲ್ಲಾ ಜೀವ ಸಂಕುಲಗಳಿಗೂ ತೊಂದರೆ ಉಂಟಾಗುವುದು, ಆದ್ದರಿಂದ, ನಾವು ಓಝೋನ್ ಪದರ ಸಂರಕ್ಷಣೆಗೆ ಎಲ್ಲರೂ ಕಟಿಬದ್ದರಾಗಿರಬೇಕೆಂದು ತಿಳಿಸಿದರು.
ಓಝೋನ್ ಪದರ ಮಹತ್ವ ಕುರಿತು ವಿವರಣೆ ನೀಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ವಾತಾವರಣದ ಒಂದು ಭಾಗವಾಗಿರುವ ಓಝೋನ್ ಎನ್ನುವುದು ಆಮ್ಲಜನಕದ ಒಂದು ರೂಪ, ಭೂಮಿಯ ಮೇಲೈಯಿಂದ ವಾಯುಮಂಡಲ ದಲ್ಲಿ ಸುಮಾರು 15 ರಿಂದ 35 ಕಿ.ಮೀ. ಮೇಲ್ಪಟ್ಟ ಪ್ರದೇಶದಲ್ಲಿ ಓಝೋನ್ ಪದರವಿದೆ. 1839ರಲ್ಲಿ ಭೂಮಿಯ ರಕ್ಷಾಕವಚವಾಗಿ ವಾತಾವರಣದ ನೈಸರ್ಗಿಕ ಅನಿಲವೆಂದು ಇದನ್ನು ಪರಿಗಣಿಸ ಲಾಗಿದೆ. ಓಝೋನ್ ಪದರದ ರಕ್ಷಣೆಗಾಗಿ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ಸಾಗುತ್ತಿವೆಯಾ ದರೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದರು.
ಓಝೋನ್ ಪದರದ ಹಾನಿಯಿಂದ ನೇರಳಾತೀತ ನೀಲ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶಮಾಡಿ ಜೀವ ಸಂಕುಲಕ್ಕೆ ಹಾನಿ ಉಂಟುಮಾಡುತ್ತದೆ. ಹಾಗೂ ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ. ಇಂಗಾಲ ಪ್ರಮಾಣದ ಬಳಕೆಗೆ ಕಡಿವಾಣ ಹಾಕಿ ಓಝೋನ್ ಪದರದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಓಝೆ್ಪೂನ್ ಪದರದ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಶಿಥಿಲೀಕರಣ ಘಟಕಗಳಲ್ಲಿ ಹೊರಸೂಸುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ನಾವು ಪರಿಸರಲ್ಲಿ ಮಾಲಿನ್ಯ ತಡೆಯುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ , ಶಿಕ್ಷಕರಾದ ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಕಛೇರಿ ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿ ಸಂಘದ ನಾಯಕಿ ಐಶ್ವರ್ಯ, ಉಪ ನಾಯಕ ಗೌತಮ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಇದ್ದರು.
ಪರಿಸರ ಜಾಗೃತಿ ಜಾಥಾ: ನಂತರ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಓಝೋನ್ ಪದರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೂಡ್ಲೂರು ಗ್ರಾಮದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಗಮನ ಸೆಳೆದ ಓಝೋನ್ ಪದರದ ಮಾದರಿ : ಇದೇ ವೇಳೆ ವಿದ್ಯಾರ್ಥಿಗಳು ತಯಾರಿಸಿದ್ದ ಓಝೋನ್ ಪದರದ ಮಾದರಿ ಗಮನ ಸೆಳೆಯಿತು. ಓಝೋನ್ ದಿನದ ಅಂಗವಾಗಿ ವಿದ್ಯಾರ್ಥಿಗಳು ರಚಿಸಿದ್ದ ಓಝೋನ್ ಪದರ ಸಂರಕ್ಷಣಾ ಚಿತ್ರಗಳು ಆಕರ್ಷಣೀಯವಾಗಿದ್ದವು.
ವಿದ್ಯಾರ್ಥಿಗಳಿಗೆ ಓಝೋನ್ ಪದರ ರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಟಿ.ಜಿ.ಪ್ರೇಮ್ ಕುಮಾರ್ ಭೋದಿಸಿದರು.