ಮಡಿಕೇರಿ ಅ.11 : ಕುಶಾಲನಗರದ ಕೋಣಮಾರಿಯಮ್ಮ ದೇವಸ್ಥಾನದ ಬಳಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರದ ನಿವಾಸಿ ಯತೀಶ್.ಎ.ಎಂ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 600 ಗ್ರಾಂ ಬೆಳ್ಳಿ ಮತ್ತು 40 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕೋಣಮಾರಿಯಮ್ಮ ದೇವಸ್ಥಾನದ ಬಳಿಯ ನಿವಾಸಿ ಸತೀಶ್ ಕುಮಾರ್ ಎಂಬುವವರ ಮನೆಯಲ್ಲಿ ಜೂ.24 ರಂದು ಕಳ್ಳತನ ನಡೆದಿತ್ತು.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ಎ.ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್.ಕೆ, ಪಿಎಸ್‌ಐ ಹೆಚ್.ವಿ.ಚಂದ್ರಶೇಖರ್, ನಗರ ಪಿಎಸ್‌ಐ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಶ್ಲಾಘಿಸಿದ್ದಾರೆ.
::: ಮಾಹಿತಿ ನೀಡಿ :::
ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿರುವ ಪೊಲೀಸರು ಮಾಹಿತಿ ನೀಡಿದವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲವೆಂದು ತಿಳಿಸಿದ್ದಾರೆ.










