ಮಡಿಕೇರಿ ಅ.17 : ಮಡಿಕೇರಿ ದಸರಾ ಜನೋತ್ಸವದಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾತ್ರಿ 10 ಗಂಟೆಯ ನಂತರ ಡಿಜೆ ಅಬ್ಬರ ಇರಬಾರದೆಂದು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್‌ಪಿ, ಡಿಜೆ ಬಳಕೆ ಕುರಿತು ನ್ಯಾಯಾಲಯ ವಿಧಿಸಿರುವ ನಿಬಂಧನೆಗಳನ್ನು ವಿವರಿಸಿದರು. ಕಾನೂನು ಪಾಲನೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಜೆ ಬಳಸುವ ಸಂದರ್ಭ ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಿದೆ. ರಾತ್ರಿ ಹತ್ತು ಗಂಟೆಯ ನಂತರ ಡಿಜೆ ಶಬ್ಧ ನಿಯಂತ್ರಣದಲ್ಲಿರಬೇಕು, ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲವೆಂದು ತಿಳಿಸಿದರು.
ದಸರಾ ಬಂದೋಬಸ್ತ್ ಗಾಗಿ ಕೆಎಸ್‌ಆರ್‌ಪಿ ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುವುದು. ಗೃಹ ರಕ್ಷಕ ದಳದ ಸಿಬ್ಬಂದಿಗಳು ಕೂಡ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕರ್ಕಷ ಶಬ್ಧದ ಪೀಪಿ ಗಳನ್ನು ಮಾರಾಟ ಮಾಡುವಂತ್ತಿಲ್ಲ, ಒಂದು ವೇಳೆ ಮಾರಾಟ ಮಾಡಿದರೆ ಪೊಲೀಸರ ವಿಶೇಷ ತಂಡ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಿದೆ. ನಿಯಮಬಾಹಿರ ಚಟುವಟಿಕೆ ನಡೆಸುವ ಸಾಧ್ಯತೆಗಳಿರುವ ಕಾರಣ ಮುಖವಾಡಗಳ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ. ಒಟ್ಟಿನಲ್ಲಿ ದಸರಾ ಸಂದರ್ಭ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ದಸರಾ ಸಮಿತಿ ಮತ್ತು ವಿವಿಧ ದೇವಾಲಯಗಳ ಮಂಟಪ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.












