ಮಡಿಕೇರಿ ಅ.19 : ಪ್ರೀತಿ, ಸೌಹಾರ್ದತೆ, ಮಾನವೀಯ ಕಳಕಳಿಯನ್ನು ತನ್ನೊಳಗೆ ಮಿಳಿತವಾಗಿಸಿಕೊಂಡಿರುವ ‘ಜಾನಪದ’ವೆನ್ನುವುದು ಬದುಕಿನ ಪದ್ಧತಿಯೇ ಆಗಿದ್ದು, ಇಂತಹ ಜಾನಪದ ಸಂಸ್ಕೃತಿಯನ್ನು ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನಗಳೊಂದಿಗೆ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಮಡಿಕೇರಿಯ ಜಾನಪದ ದಸರಾ ಉತ್ಸವ ಯಶಸ್ವಿಯಾಯಿತು.
ಜಾನಪದ ಉಡುಪು ತೊಟ್ಟ ಮಕ್ಕಳು, ಪುಟಾಣಿಗಳ ಚೆಂಡೆ ಮೇಳ, ವೀರಗಾಸೆ, ಪಟ ಕುಣಿತ, ಡೊಳ್ಳು ಕುಣಿತಗಳೊಂದಿಗೆ ಗುರುವಾರ ಬೆಳಗ್ಗೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಗಾಂಧಿ ಮೈದಾನದವರೆಗೆ ನಡೆದ ‘ಕಲಾ ಜಾಥ’ ದಸರಾ ಉತ್ಸವಕ್ಕೆ ವಿಶೇಷ ಮೆರುಗನ್ನು ನೀಡಿ, ಈ ನೆಲದ ಶ್ರೀಮಂತ ಜಾನಪದ ಸಂಸ್ಕೃತಿಯ ಸೌಗಂಧವನ್ನು ಪಸರಿಸಿತು. ಕಲಾ ಜಾಥಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರೆ, ಜಾನಪದ ದಸರಾ ಉತ್ಸವದ ಪ್ರಮುಖ ರೂವಾರಿಯಾದ ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮತ್ತು ಪದಾಧಿಕಾರಿಗಳು, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಪದಾಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಜಾನಪದ ಸಂಸ್ಕೃತಿಯೊಂದಿಗೆ ಮುನ್ನಡೆಯಿರಿ- ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ರೂಪಿಸಿದ್ದ ಕಲಾ ಸಂಭ್ರಮ ವೇದಿಕೆಯಲ್ಲಿ ರಾಗಿ ಬೀಸುವ ಜಾನಪದ ಹಾಡಿನ ಹಿಮ್ಮೇಳದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಾಗಿಕಲ್ಲನ್ನು ತಿರುಗಿಸುವ ಮೂಲಕ ಜಾನಪದ ದಸರಾಕ್ಕೆ ಚಾಲನೆ ನೀಡಿ, ಜಾನಪದ ಶ್ರೀಮಂತ ಸಂಸ್ಕೃತಿಯೊಂದಿಗೆ ನಾವೆಲ್ಲರು ಮುನ್ನಡೆಯಬೇಕಾಗಿದೆ. ಬದುಕಿನ ಪದ್ಧತಿಯೇ ಆಗಿರುವ ಜಾನಪದದ ಅರಿವನ್ನು ಮುಂದಿನ ಪೀಳಿಗೆಗೆ ನೀಡುವ ಅಗತ್ಯವಿದೆಯೆಂದು ನುಡಿದರು.
ಈ ನೆಲದ ಬದುಕು, ಪರಂಪರೆ, ಹಬ್ಬ ಹರಿದಿನಗಳನ್ನು ಒಳಗೊಂಡ ಜಾನಪದ ಸಂಸ್ಕೃತಿಯ ಉಳಿವು ಅತ್ಯವಶ್ಯವಾಗಿ ನಡೆಯಬೇಕಾಗಿದ್ದು, ಇದಕ್ಕಾಗಿ ಇದರ ಕುರಿತ ತಿಳುವಳಿಕೆಯನ್ನು ಯುವ ಪೀಳಿಗೆಗೆ ನೀಡುವುದು ಅತ್ಯವಶ್ಯ. ವಿಶಾಲವಾದ ಭಾರತ ದೇಶದಲ್ಲಿ ನೂರಾರು ಭಾಷೆ, ಸಂಸ್ಕೃತಿಗಳಿವೆಯಾದರು, ಜಾನಪದವೆನ್ನುವುದು ಒಂದೇ ಆಗಿದೆ. ಎಲ್ಲರ ನಡುವಿನ ಪ್ರೀತಿ ವಿಶ್ವಾಸ, ಪರಸ್ಪರ ಸೌಹಾರ್ದತೆಗಳೆ ಜಾನಪದದ ಆಂತರ್ಯದ ಮೂಲಸೆಲೆಯಾಗಿದೆ. ಈ ಹಿನ್ನೆಲೆ ಜಾನಪದ ಕಾರ್ಯಕ್ರಮ ದಸರಾ ಉತ್ಸವಕ್ಕಷ್ಟೆ ಸೀಮಿತವಾಗದಿರಲಿ ಎಂದು ಆಶಿಸಿದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಈ ಬಾರಿ ಏಳನೇ ವರ್ಷದ ಜಾನಪದ ದಸರಾ ಉತ್ಸವವನ್ನು ನಡೆಸಲಾಗುತ್ತಿದೆ. ಇದರ ಮೂಲಕ ಮರೆಯಾಗಿ ಹೋಗುತ್ತಿರುವ ನಮ್ಮ ಜಾನಪದ ಬದುಕು, ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಶ್ಲಾಘನೀಯ ಕಾರ್ಯ ನಡೆಯುತ್ತಿದೆಯೆಂದರು.
ಮುಂಜಾನೆಯಿಂದ ಸಂಜೆಯವರೆಗಿನ ಗ್ರಾಮಿಣ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಜಾನಪದದ ಸೊಗಡನ್ನು ಕಾಣಬಹುದಾಗಿದೆ. ಇಂತಹ ಶ್ರೀಮಂತ ಜಾನಪದ ಪರಂಪರೆಯ ಉಳಿವಿನಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಬದಲಾದ ಕಾಲ ಘಟ್ಟದಲ್ಲಿ ಇಂಗ್ಲೀಷ್ ಅನಿವಾರ್ಯವಾದರು, ತಮ್ಮ ಮಕ್ಕಳಿಗೆ ಈ ನೆಲದ ಭಾಷೆ, ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡಲು ಎಂದಿಗೂ ಮರೆಯದಿರಿ ಎಂದು ಕಿವಿ ಮಾತುಗಳನ್ನಾಡಿ, ಜಾನಪದ ಸಂಸ್ಕೃತಿಯ ಕ್ರೀಡೆಗಳನ್ನು ಶಾಲಾ ಮಟ್ಟದಲ್ಲಿ ನಡೆಸಲು ಜಾನಪದ ಪರಿಷತ್ ಮುಂದಾಗುವಂತೆ ಮನವಿ ಮಾಡಿದರು.
ಸೌಹಾರ್ದತೆ ಹಂಚುವ ಶಕ್ತಿ ಚೈತನ್ಯ ಜಾನಪದಕ್ಕಿದೆ- ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಪರಸ್ಪರ ಪ್ರೀತಿ, ವಿಶ್ವಾಸ, ಮಮಕಾರ, ಸೌಹಾರ್ದತೆಗಳನ್ನು ಹೃದಯದಿಂದ ಹೃದಯಕ್ಕೆ ಹಂಚುವ ಶಕ್ತಿ ಮತ್ತು ಚೈತನ್ಯ ‘ಜಾನಪದ’ಕ್ಕಿದೆ. ಇತರರನ್ನು ವಿಶ್ವಾಸದಿಂದ ಕಂಡು ಪ್ರೀತಿ , ಸೌಹಾರ್ದತೆಗಳನ್ನು ತೋರುವ ಮನಸ್ಥಿತಿ ಅತ್ಯಂತ ಸಹಜವಾಗಿ ಜಾನಪದ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಇಂತಹ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಮುನ್ನಡೆಯಬೇಕೆನ್ನವ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಭಾರತವನ್ನಾಳಿದ ಬ್ರಿಟೀಷರು ಇಲ್ಲಿನ ಶಿಕ್ಷಣ ಕ್ರಮಗಳನ್ನು, ಸಂಸ್ಕೃತಿಯನನ್ನು ಬದಲಾಯಿಸುವ ಮೂಲ ಚಿಂತನೆಗಳನ್ನು ಹೊಂದಿದ್ದಂತಹವರು. ಅಂತಹ ಬ್ರಿಟೀಷರು ಇಲ್ಲಿನ ಗ್ರಾಮೀಣ ಭಾಗದ ಜನತೆಯಲ್ಲಿ ಕಂಡು ಬಂದ ಪ್ರೀತಿ, ವಿಶ್ವಾಸ, ಪರಸ್ಪರ ಸಹಕಾರ, ಸಹಾನುಭೂತಿಗಳಿಂದ ಆಶ್ಚರ್ಯ ಚಕಿತರಾಗಿದ್ದರು. ಬದುಕಿನ ಈ ಸುಂದರ ಪಾಠಗಳನ್ನು ಮತ್ತೆ ಅಳವಡಿಸಿಕೊಳ್ಳಲು ಬ್ರಿಟೀಷರಿಗೆ ಜಾನಪದ ಬದುಕು ಪ್ರೇರಣೆಯನ್ನು ನೀಡಿತ್ತೆಂದು ಅನಂತಶಯನ ಅವರು ತಿಳಿಸಿ, ಜಾರ್ಜ್ ಫರ್ಡಿನಾಂಡ್ ಕಿಟ್ಟೆಲ್ ಅವರು ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ, ಅಲ್ಲಿನ ಜನತೆಯೊಂದಿಗೆ ಒಡನಾಡಿ ರಚಿಸಿರುವ ‘ಶಬ್ದ ಕೋಶ’ ಕನ್ನಡ ಅಧಿಕೃತವಾದ ಶಬ್ದಕೋಶವಾಗಿದೆ. ಅದರಲ್ಲಿ 5 ಸಾವಿರಕ್ಕೂ ಹೆಚ್ಚಿನ ಜಾನಪದ ಗಾದೆಗಳನ್ನು ಶಬ್ದಗಳ ಅರ್ಥ ವಿವರಣೆಗಳನ್ನು ನೀಡಲು ಬಳಸಲಾಗಿದೆಯೆಂದು ಮಾಹಿತಿಯನ್ನಿತ್ತರು.
ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳ ನಡುವೆ ಭಾವನೆಗಳೆ ಇಲ್ಲದ ಬದುಕನ್ನು ಕಾಣುತ್ತಿದ್ದು, ಇದು ಬದಲಾಗಬೇಕಾಗಿದೆ. ಅನಾದಿ ಕಾಲದ ಜಾನಪದದೊಂದಿಗೆ ಸುಖೀ ಮತ್ತು ಪ್ರೇಮ ತುಂಬಿದ ಸಮಾಜವನ್ನು ಕಟ್ಟೋಣವೆನ್ನುವೆ ಆಶಯವನ್ನು ವ್ಯಕಪಡಿಸಿದರಲ್ಲದೆ, ಕೊಡಗು ಜಿಲ್ಲಾ ಜಾನಪದ ಪರಿಷತ್‍ಗೆ ಕಟ್ಟಡವೊಂದನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ, ಬೇಡಿಕೆ ಈಡೇರಿಸಿದಲ್ಲಿ ಜಾನಪದ ಮ್ಯೂಸಿಯಂ ಮಾಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಮಡಿಕೇರಿ ದಸರಾ ಸಮಿತಿ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಸಿ. ಸತೀಶ್, ನಗರಸಭಾ ಸದಸ್ಯರಾದ ಶಾರದಾ ನಾಗರಾಜು, ಕೆ.ಎಸ್.ರಮೇಶ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷರುಗಳಾದ ಸುಜಲಾ ದೇವಿ, ಟೋಮಿ ಥೋಮಸ್, ಪ್ರಕಾಶ್, ಚಂದ್ರ್ರಮೋಹನ್, ಪ್ರಶಾಂತ್, ದಿಲನ್ ಚಂಗಪ್ಪ ಮೊದಲಾದವರಿದ್ದರು.
ಜಾನಪದ ಪರಿಷತ್‍ನ ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರೆ, ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷರು ಹಾಗೂ ಜಾನಪದ ಪರಿಷತ್ ಪದಾಧಿಕಾರಿ ಅನಿಲ್ ಎಚ್.ಟಿ. ಸ್ವಾಗತಿಸಿದರು. ಜಾನಪದ ಪರಿಷತ್ ಖಜಾಂಚಿ ಸಂಪತ್ ಕುಮಾರ್ ವಂದಿಸಿದರು.
ಜಾನಪದ ವಸ್ತು ಪ್ರದರ್ಶನ- ಮೂರ್ನಾಡು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳಾದ ಕಿಗ್ಗಾಲು ಹರೀಶ್ ಅವರು ಇದೇ ಸಂದರ್ಭ ಆಯೋಜಿಸಿದ್ದ, ಅತ್ಯಪರೂಪದ ಹಳೆಯ ನಿತ್ಯೋಪಯೋಗಿ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು.
::: ಬೊಂಬೆ ಜೋಡಣೆ, ಕಥಾ ಸ್ಪರ್ಧೆ ವಿಜೇತರು :::
ಮಡಿಕೇರಿ: ಜಾನಪದ ದಸರಾ ವೇದಿಕೆ ಸಮಾರಂಭದಲ್ಲಿ ಬೊಂಬೆ ಜೋಡಣೆ ಸ್ಪರ್ಧೆ ಮತ್ತು ಕಥೆ ಹೇಳುವ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಬೊಂಬೆ ಜೋಡಣೆ ಸ್ಪರ್ಧೆಯಲ್ಲಿ ಮಾಲಾ ರೋಶನ್ ಮತ್ತು ಶುಭಾ ವಿಶ್ವನಾಥ್ ಪ್ರಥಮ, ನೀತು ಮತ್ತು ಸವಿತಾ ರಾಕೇಶ್ ದ್ವಿತೀಯ, ಹೇಮಾ ರಘ ತೃತೀಯ ಬಹುಮಾನ ಪಡೆದುಕೊಂಡರು.
ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗೀರಥಿ ಹುಲಿತಾಳ ಪ್ರಥಮ, ಪ್ರಮೀಳಾ ರಮೇಶ್ ದ್ವಿತೀಯ ಮತ್ತು ನಗರದ ಸಂತ ಜೋಸೆಫರ ಶಾಲೆಯ ಕುಮಾರಿ ಅನಘ ತೃತೀಯ ಬಹುಮಾನ ಸ್ವೀಕರಿಸಿದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*