ಮಡಿಕೇರಿ ಅ.31 ; ಅಧಿಕಾರಿಗಳು ಲಂಚ ಕೇಳಿದರೆ ವಿಡಿಯೋ ಮಾಡಿ, ಸೂಕ್ತ ಸಾಕ್ಷ್ಯ ಸಹಿತ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ, ವಿರಾಜಪೇಟೆ ಕ್ಷೇತ್ರದಲ್ಲಿ ಲಂಚದ ಕುರಿತು ಯಾವುದೇ ದೂರುಗಳು ಕೇಳಿ ಬಂದಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ, ಜನರು ಕೂಡ ಜಾಗೃತರಾಗಬೇಕು. ಲಂಚ ಕೇಳಿದಾಕ್ಷಣ ನೀಡದೆ ಅದನ್ನು ಪ್ರತಿಭಟಿಸಬೇಕು, ಧ್ವನಿ ಮುದ್ರಣ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು. ಸೂಕ್ತ ಸಾಕ್ಷ್ಯ ಸಹಿತ ದೂರು ನೀಡಿದರೆ ನಾನು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.










