ಮಡಿಕೇರಿ ನ.13 : ಅಕಾಲಿಕ ಮಳೆಯಿಂದಾಗಿ ಈ ವರ್ಷ ಭಾರತದ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 2023-24 ರ ಸಾಲಿಗೆ ಕಾಫಿ ಮಂಡಳಿಯ ದೇಶದ ಒಟ್ಟು ಕಾಫಿ ಉತ್ಪಾದನೆಯನ್ನು 3,74,200 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಿದ್ದರೂ ಈ ವರ್ಷ ಉತ್ಪಾದನೆಯು ಶೇ.20, 30 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಕಾಫಿ ಉದ್ಯಮದ ಸಂಸ್ಥೆಗಳು ತಿಳಿಸಿವೆ.
ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ ಆಫ್ ಸದರ್ನ್ ಇಂಡಿಯಾ (ಯುಪಿಎಎಸ್‌ಐ) ಕಾಫಿ ಸಮಿತಿಯ ಅಧ್ಯಕ್ಷ ಅಜೋಯ್ ತಿಪಯ್ಯ ಅವರ ಪ್ರಕಾರ “ನಿವ್ವಳ ಇಳುವರಿಯು ಈ ಸಾಲಿನಲ್ಲಿ ಶೇ.20, 30 ರಷ್ಟು ಕಡಿಮೆಯಾಗಲಿದೆ” “ಮೊದಲನೆಯದಾಗಿ, ವಲಸೆ ಕಾರ್ಮಿಕರು ದೂರವಿರುವಾಗ ಕಾಫಿ ಈಗಾಗಲೇ ಕೊಯ್ಲಿಗೆ ಸಿದ್ಧವಾಗಿದೆ. ಮತ್ತು ಎರಡನೆಯದಾಗಿ, ಅಕಾಲಿಕ ಮಳೆಯಿಂದ ಅನೇಕ ಎಸ್ಟೇಟ್‌ಗಳಲ್ಲಿ ಸಾಕಷ್ಟು ಕಾಫಿ ಹಣ್ಣಾಗಿದ್ದು, ಉದುರುವಿಕೆಯು ಆರಂಭಗೊಂಡಿದೆ..
ಸಾಮಾನ್ಯವಾಗಿ ಕಾಫಿ ಕೊಯ್ಲು ಡಿಸೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ಎರಡು ತಿಂಗಳು ಕೊಯ್ಲು ಇರುತ್ತದೆ. ರೊಬಸ್ಟಾ ಕೊಯ್ಲು ಇನ್ನೂ ತಡವಾಗುತ್ತದೆ. ಆದಾಗ್ಯೂ, ಈ ವರ್ಷ, ಈ ಪ್ರದೇಶದ ಕೆಲವು ಎಸ್ಟೇಟ್‌ಗಳು ಈಗಾಗಲೇ ಹಣ್ಣುಗಳು ಮಾಗಿದ ಕಾರಣ ಕೊಯ್ಲು ಪ್ರಾರಂಭಿಸಿವೆ ಮತ್ತು ಅಕಾಲಿಕ ಮಳೆಯಿಂದಾಗಿ ಮಾಗಿದ ಹಣ್ಣುಗಳು ಸೀಳಲು, ಕೊಳೆಯಲು ಮತ್ತು ಬೀಳಲು ಕಾರಣವಾಗಿವೆ. ,ಹಾಸನ ಮತ್ತು ಚಿಕ್ಕಮಗಳೂರಿನ ತೋಟಗಳಲ್ಲಿ ಇದು ಕಂಡು ಬಂದಿದೆ. ಆದರೆ ಒಂದು ವಾರದ ನಂತರ ಮಳೆ ಮುಂದುವರಿದರೆ ಕೊಡಗಿನ ತೋಟಗಳೂ ಸಹ ಇದೇ ರೀತಿಯ ಪರಿಸ್ಥಿತಿಯನ್ನು ನೋಡಬಹುದು ಎಂದು ಬೆಳೆಗಾರರು ಹೇಳುತ್ತಾರೆ.
ಭಾರತದ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವು ಶೇ.70 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಕಾಫಿ ಬೆಳೆಯುವ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳು ಕಳೆದ ವರ್ಷ ಡಿಸೆಂಬರ್ ಮಧ್ಯದವರೆಗೆ ಮಳೆಯನ್ನು ಪಡೆದಿವೆ, ಇದು ಈ ವರ್ಷ ಬೇಗನೇ ಹೂವಾಗಲು ಮತ್ತು ಕಾಯಿ ಕಟ್ಟಲು ಕಾರಣವಾಗಿದೆ. ಚಿಕ್ಕಮಗಳೂರಿನ ಕಾಫಿ ಬೆಳೆಗಾರರೊಬ್ಬರ ಪ್ರಕಾರ ಕಾಯಿಗಳು ಬೇಗನೆ ಹಣ್ಣಾಗುತ್ತಿವೆ, ಆದರೆ ಸಮವಾಗಿ ಹಣ್ಣಾಗುವುದಿಲ್ಲ, ಆದ್ದರಿಂದ ಕೊಯ್ಲು ಮಾಡುವುದು ಕಠಿಣ ಮತ್ತು ದುಬಾರಿಯಾಗುತ್ತಿದೆ ಏಕೆಂದರೆ ಬರೇ ಹಣ್ಣನ್ನೇ ಕೊಯ್ಯುವುದಾದರೆ ಮೂರು ನಾಲ್ಕು ಬಾರಿ ಕೊಯ್ಯಬೇಕಾಗುತ್ತದೆ.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಅಧ್ಯಕ್ಷ ಮಹೇಶ್ ಶಶಿಧರ್ ಮಾಧ್ಯಮಗಳ ಜತೆ ಮಾತನಾಡಿ, ಬ್ರೆಜಿಲ್ ನಲ್ಲಿ ಈ ವರ್ಷ ಬಂಪರ್ ಬೆಳೆ ಆಗುತ್ತದೆ ಎಂದು ವರದಿ ಆಗಿರುವುದರಿಂದ ಭಾರತೀಯ ಕಾಫಿಗಳ ಬೆಲೆ ಮತ್ತಷ್ಟು ಇಳಿಕೆಯಾಗಬಹುದು ಎಂದು ಹೇಳಿದರು. ರಸಗೊಬ್ಬರಗಳು ಮತ್ತು ರಾಸಾಯನಿಕಗಳ ವೆಚ್ಚದಲ್ಲಿ ತೀವ್ರ ಏರಿಕೆ, ಕೂಲಿ ಮತ್ತು ವಿದ್ಯುತ್ ದರ ಹೆಚ್ಚಳದಂತಹ ಅನೇಕ ಸವಾಲುಗಳನ್ನು ತೋಟಗಾರರು ಈಗಾಗಲೇ ಎದುರಿಸುತ್ತಿದ್ದಾರೆ ಎಂದು ಶಶಿಧರ್ ಹೇಳಿದರು. ಕಾಫಿಯ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಶೇ.60-70 ರಷ್ಟು ಕಾರ್ಮಿಕರ ವೆಚ್ಚ ಆಗಿದ್ದು ಈ ಅಕಾಲಿಕ ಮಳೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಅವರು ಹೇಳಿದರು.
ಈ ನಡುವೆ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಕಾಫಿ ದರ ಕುಸಿತ ದಾಖಲಿಸಿದ್ದು ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕಳೆದ ಆರು ತಿಂಗಳ ಹಿಂದೆ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರ 14.800 ರೂಪಾಯಿ ಇದ್ದುದು ಇಂದು ಕೊಡಗಿನ ಮಾರುಕಟ್ಟೆಯಲ್ಲಿ 50 ಕೆ.ಜಿ ಚೀಲಕ್ಕೆ 11,300 ರೂಪಾಯಿಗಳಿಗೆ ಕುಸಿದಿದೆ. ಅರೇಬಿಕಾ ಚೆರಿ ದರ 7200 ರಿಂದ 6450 ರೂಪಾಯಿಗಳಿಗೆ ಕುಸಿದಿದೆ. ರೊಬಸ್ಟಾ ಪಾರ್ಚ್‌ಮೆಂಟ್ ದರ ಮಾತ್ರ ಅಲ್ಪ ಏರಿಕೆ ದಾಖಲಿಸಿದೆ.
ವರದಿ : ಕೋವರ್ ಕೊಲ್ಲಿ ಇಂದ್ರೇಶ್