ಕುಶಾಲನಗರ ನ.15 : ಕುಶಾಲನಗರದ ಶ್ರೀ ಕೋಣಮಾರಿಯಮ್ಮ ದೇವಾಲಯದ 21ನೇ ವರ್ಷದ ವಾರ್ಷಿಕ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.
ನ.14 ಮತ್ತು 15 ರಂದು ಎರಡು ದಿನಗಳ ಕಾಲ ನಡೆದ ಪೂಜೋತ್ಸವದ ಅಂಗವಾಗಿ ಕಾವೇರಿ ನದಿಯಿಂದ ಕಳಸದೊಂದಿಗೆ ದೇವಿ ವಿಗ್ರಹ ತಂದು ಪ್ರತಿಷ್ಠಾಪಿಸಿ, ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರಧಾನ ಅರ್ಚಕ ಎಚ್.ಜೆ.ಲೋಕೇಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಮಾಜಿ ಶಾಸಕ ಅಪ್ಪಚ್ಚುರಂಜನ್ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಪೂಜಾ ಕೈಂಕರ್ಯಗಳ ಬಗ್ಗೆ ದೇವತಾ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಸುರೇಶ್, ಮಾಜಿ ಅಧ್ಯಕ್ಷ ಜೈವರ್ಧನ್ ಮಾಹಿತಿ ನೀಡಿ, ಪ್ರತಿ ವರ್ಷದಂತೆ ಮಂಗಳವಾರ 5 ಸಾವಿರ ಮಂದಿ, ಬುಧವಾರ 10 ರಿಂದ 15 ಸಾವಿರ ಮಂದಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ನೆರೆದಿದ್ದ ಭಕ್ತರಿಗೆ ದೇವತಾ ಸೇವಾ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣಾ ಕಾರ್ಯ ನಡೆಯಿತು.
ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಎಸ್.ಜೆ.ಸತೀಶ್, ಖಜಾಂಚಿ ಪರಮೇಶ್, ಸಹ ಕಾರ್ಯದರ್ಶಿ ಮಂಜು, ಮಾಜಿ ಅಧ್ಯಕ್ಷರಾದ ಸತೀಶ್, ಚೆಲುವರಾಜು, ಶಿವಾನಂದ ಸೇರಿದಂತೆ ನಿರ್ದೇಶಕರು ಇದ್ದರು.