ನಾಪೋಕ್ಲು ಡಿ.16 : ಮಡಿಕೇರಿ ತಾಲೂಕಿನ ಎರಡನೆಯ ಮುಖ್ಯ ಪಟ್ಟಣವಾಗಿರುವ ನಾಪೋಕ್ಲುವಿನಿಂದ ಬೇತು ಮಾರ್ಗವಾಗಿ ಎರಡು ಕಿ.ಮೀ. ಅಂತರನವನು ಕ್ರಮಿಸಿದರೆ ಸಿಗುವ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನ ಒಂದು ಸುಂದರ ಪರಿಸರ.
ದೇಗುಲ ಎಂದೊಡನೆ ತಟ್ಟನೆ ನೆನಪಾಗುವ ಗುಡಿಗೋಪುರಗಳು ಇಲ್ಲಿಲ್ಲ. ಎತ್ತರದ ಸಮತಟ್ಟು ಸ್ಥಳದಲ್ಲಿ ಹಚ್ಚ ಹಸಿರ ಪರಿಸರದ ನಡುವೆ 6 ಅಡಿ ಎತ್ತರದ ವೃತ್ತಾಕಾರದ ಕಟ್ಟೆ. ಇದರ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು.
ಮಕ್ಕಿ ಶಾಸ್ತಾವು ನಿಸರ್ಗ ದೇವಾಲಯಗಳಲ್ಲಿ ಒಂದು. ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ. ಒಮ್ಮೆ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್ನಲ್ಲಿ ನಡೆಯುತ್ತದೆ. ಎತ್ತು ಪೋರಾಟ, ದೀಪಾರಾಧನೆ, ಅಜ್ಜಪ್ಪ ಕೋಲ ಹಾಗೂ ವಿಷ್ಣುಮೂರ್ತಿ ಕೋಲಗಳು, ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ.
ಮಕ್ಕಿ ದೇವಾಲಯದ ವಿಶಿಷ್ಟತೆಗೆ ಸಂಬ0ಧಿಸಿದ0ತೆ ಹಲವು ಕಥೆಗಳು ಪ್ರಚಲಿತದಲ್ಲಿದೆ. ಊರವರ ನಂಬಿಕೆಗೆ ತಕ್ಕಂತೆ ಇಲ್ಲಿ ಶಾಸ್ತಾವು ಸನ್ನಿಧಿಯಲ್ಲಿ ಮಳೆಗಾರಿ ರುದ್ರಾಭಿಷೇಕ ಮಾಡಿಸಿದರಂತೆ ಅದಾದ ಮೂರು ದಿನಗಳಲ್ಲಿ ಧಾರಾಕಾರವಾಗಿ ಮಳೆಯಾಯಿತಂತೆ ಈ ಸಂದರ್ಭವನ್ನು ಊರವರು ಸದಾ ನೆನಪಿಸಿಕೊಳ್ಳುತ್ತಾರೆ.
ಇಷ್ಟಾರ್ಥ ಸಿದ್ಧಿಗೆ ಮಣ್ಣಿನ ಪ್ರತಿ ಕೃತಿ ಹರಕೆಯ ನಾಯಿ:
ಈ ದೇವಸ್ಥಾನದಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಹಬ್ಬಕ್ಕೆ ಹದಿನೈದು ದಿನಗಳ ಮೊದಲು ನಿಗದಿತ ಸ್ಥಳದಲ್ಲಿ ಮಣ್ಣಿನ ನಾಯಿಯ ರಚನೆ ಕಾರ್ಯ ನಡೆಯುತ್ತದೆ. ಪುರಾತನ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬ0ಧಿಸಿದ ಹನ್ನೇರಡು ಕುಲದವರು ಹನ್ನೇರಡು ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವ ಪದ್ದತಿ ನಡೆದುಕೊಂಡು ಬಂದಿದೆ. ಉಳಿದಂತೆ ಗ್ರಾಮದ ಜನ, ಭಕ್ತರು ಹರಕೆಯ ಮಣ್ಣಿನ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ.
ಈ ವರ್ಷ ಡಿ.16 ಶನಿವಾರ ದಂದು ಹರಕೆಯ ನಾಯಿ ಒಪ್ಪಿಸುವುದು. 17 ರಂದು ಭಾನುವಾರ ಕೊಟ್ಟಿ ಹಾಡುವುದು, 18 ಸೋಮವಾರ ರಾತ್ರಿ ದೀಪಾರಾಧನೆ, ತೆರೆ ಹಾಗೂ 19 ರಂದು ವಿವಿಧ ಭೂತಾರಾಧನೆ ಹಾಗೂ ಮೇಲೇರಿ, ವಾರ್ಷಿಕ ಹಬ್ಬನಡೆಯಲಿದ್ದು ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸುತ್ತಾರೆ.
ವರದಿ-ದುಗ್ಗಳ ಸದಾನಂದ