ಕಾರ್ತಿಕ ಮಾಸ ಮುಗಿದ ನಂತರ ಬರುವ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದು ಪ್ರತೀ ವರ್ಷ ಶ್ರೀ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಇಂಗ್ಲೀಷ್ ಕ್ಯಾಲೆಂಡರ್ ದಿನಾಂಕದಂತೆ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಹಿಂದೂ ಪಂಚಾಂಗದ ಕ್ಯಾಲೆಂಡರ್ ಪ್ರಕಾರವೇ ನಿರ್ಧರಿಸಲಾಗುತ್ತದೆ. ಸುಬ್ರಹ್ಮಣ್ಯ ಷಷ್ಠಿಯನ್ನು ಸ್ಕಂದ ಷಷ್ಠಿ, ಚಂಪಾ ಷಷ್ಠಿಯಂತಲೂ ಕರೆಯುತ್ತಾರೆ. ಸುಬ್ರಹ್ಮಣ್ಯ ಷಷ್ಠಿಯಂದು ಭಗವಾನ್ ಶಿವ ಪಾವರ್ತಿಯರ ಎರಡನೇ ಮಗನಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ.
ಸೂರಪದ್ಮನೆಂಬ ಮಹಾನ್ ರಾಕ್ಷಸನು ತನ್ನ ಸಹೋದರರಾದ ಸಿಂಹಮುಖ ಹಾಗೂ ತಾರಕಾಸುರರೊಡಗೂಡಿ ದೇವಾದಿದೇವತೆಗಳು ಹಾಗೂ ಮಾನವರಿಗೆ ನಾನಾ ರೀತಿಯ ಕಿರುಕುಳ ನೀಡುತ್ತಿದ್ದಾಗ ಸುಬ್ರಹ್ಮಣ್ಯ ಸ್ವಾಮಿಯು ತಾರಕಸುರ ಮತ್ತಿತರ ದುಷ್ಟರನ್ನು ಸಂಹಾರ ಮಾಡಿ ಲೋಕಕ್ಕೆ ನೆಮ್ಮದಿಯನ್ನು ಕರುಣಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಶ್ರಿ ಸುಬ್ರಹ್ಮಣ್ಯ ಷಷ್ಠಿಯಂದು ಬಡವರು, ನಿರ್ಗತಿಕರಿಗೆ ಬಟ್ಟೆ ಹಾಗೂ ಅನ್ನದಾನ ಮಾಡಿದಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ಶ್ರಿ ಸುಬ್ರಹ್ಮಣ್ಯ ಷಷ್ಠಿಯಂದು ಭಕ್ತರು ಈರುಳ್ಳಿ, ಬೆಳ್ಳುಳ್ಳಿ ಬೆರೆಸದ ಸಾತ್ವಿಕ ಆಹಾರ ಸೇವಿಸುವುದು ಅಥವಾ ಉಪವಾಸ ವೃತದೊಂದಿಗೆ ಪೂಜೆ, ಭಜನೆ, ಧ್ಯಾನ, ಶ್ರಿ ಸುಬ್ರಹ್ಮಣ್ಯ ನಾಮಜಪ ಕೈಗೊಂಡಾಗ ದೇವರ ಅನುಗ್ರಹ ಲಭಿಸುವುದೆಂಬ ನಂಬಿಕೆಯಿದೆ. ಮಾತ್ರವಲ್ಲದೆ ಸರ್ಪದೋಷ, ಕುಜದೋಷ, ಚರ್ಮವ್ಯಾದಿಗಳು ನಿವಾರಣೆಯಾಗಿರುವ ಉದಾಹರಣೆಗಳಿವೆ.
ಶ್ರಿ ಸುಬ್ರಹ್ಮಣ್ಯ ಷಷ್ಠಿಯಂದು ಸ್ಥಳೀಯ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ದಕ್ಷಿಣ ಭಾರತದ ಕರ್ನಾಟಕದ ಕುಕ್ಕೆ ಸುಬ್ರಮಣ್ಯ ಸನ್ನಿಧಿ ಹಾಗೂ ತಮಿಳುನಾಡಿನ ಶ್ರೀ ಪಳನಿ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿಯ ದಿನದಂದು ವಿಶೇಷ ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರು ಶ್ರಿ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ 2023 ರ ಡಿಸಂಬರ್ 17 ಭಾನುವಾರ ಸಂಜೆ 5.33 ಗಂಟೆಯಿಂದ ಮರುದಿನ ಸೋಮವಾರ ಮಧ್ಯಾಹ್ನ 3.14 ರ ತನಕ ಷಷ್ಠಿ ತಿಥಿಯ ಪುಣ್ಯಕಾಲವಾಗಿರುತ್ತದೆ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಡಿ.18 ರ ಸೋಮವಾರ ಶ್ರೀ ಸುಬ್ರಮಣ್ಯ ಷಷ್ಠಿ ಪೂಜೆ ನಡೆಯಲಿದೆ.