ಮಡಿಕೇರಿ ಫೆ.1 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುನಿರೀಕ್ಷಿತ ಕೊಡಗು ಭೇಟಿ ಯಾವುದೇ ಅಭಿವೃದ್ಧಿ ಕಾರ್ಯಗಳ ಕುರಿತು ಭರವಸೆಗಳನ್ನು ಮೂಡಿಸದ ನಿರಾಶಾದಾಯಕ ಭೇಟಿಯಾಗಿತ್ತು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಗೆ ಯಾವುದೇ ಹೊಸ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿಲ್ಲ, ಶಂಕುಸ್ಥಾಪನೆ ನೆರವೇರಿಸಿಲ್ಲ. ತಾವು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಆರಂಭಿಸಿದ ಭಾಗಮಂಡಲ ಮೆಲ್ಸೇತುವೆ ಯೊಜನೆಯನ್ನು ಎರಡನೇ ಅವಧಿಯ ಅಧಿಕಾರದ ಎರಡು ವರ್ಷಗಳ ನಂತರ ಉದ್ಘಾಟಿಸಿದ್ದಾರೆ. ಇದು ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ. ಯಾವುದೇ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವಾಗ ಹೊಸ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಭವಿಷ್ಯದ ಭರವಸೆಗಳ ಬಗ್ಗೆ ಜನರಲ್ಲಿ ನಿರೀಕ್ಷೆಗಳಿರುತ್ತವೆ. ಆದರೆ ಸಿದ್ದರಾಮಯ್ಯ ಅವರು ಕೇವಲ ಮೆಲ್ಸೇತುವೆಯನ್ನು ಉದ್ಘಾಟಿಸಿ ಮರಳುವ ಮೂಲಕ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಸಧ್ಯದಲ್ಲೇ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿಗಳು ಕಾವೇರಿ ನಾಡು ಕೊಡಗಿಗೆ ನೀಡುವ ಕೊಡುಗೆಯ ಬಗ್ಗೆ ಭರವಸೆಯ ಮಾತುಗಳನ್ನು ಕೂಡ ಆಡಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿ ಹಲ್ಲೆ, ಬೆದರಿಕೆ, ದ್ವೇಷ, ದಾಳಿಯ ಪ್ರಕರಣಗಳು ನಡೆಯುತ್ತಿದೆ. ಅರ್ಚಕರ ಮೇಲೆ ಹಲ್ಲೆಯಾಗಿದೆ, ಕೆಲವು ದಿನಗಳ ಹಿಂದೆ ನನ್ನ ಮೇಲೆಯೂ ಹಲ್ಲೆಯಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಸುಗಮಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸದೆ ಇರುವುದು ಮತ್ತು ಭಿನ್ನಾಭಿಪ್ರಾಯ ಶಮನಕ್ಕೆ ಸೂಕ್ತ ಸಲಹೆ ಅಥವಾ ಸಂದೇಶ ನೀಡದೆ ಇರುವುದು ವಿಷಾದಕರ ಎಂದು ಭೋಜಣ್ಣ ಸೋಮಯ್ಯ ಅಭಿಪ್ರಾಯಪಟ್ಟಿದ್ದಾರೆ.