ಮಡಿಕೇರಿ ಜ.30 NEWS DESK : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ‘ಹುತಾತ್ಮರ ದಿನಾಚರಣೆ’ಯು ನಗರದಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ‘ಚಿತಾಭಸ್ಮ’ವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಗಾಂಧೀಜಿಯವರ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪ ಬಳಿ(ಗಾಂಧಿ ಮೈದಾನ) ಇರಿಸಿ ಗಾಂಧೀ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು.
ಇದೇ ವೇಳೆ ಪೊಲೀಸ್ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಹನುಮಂತ ಕೌಜಲಗಿ ಮತ್ತು ತಂಡದವರು ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯವು ಸಿದ್ದೇಶ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡದವರು ರಾಷ್ಟ್ರಗೀತೆ ಹಾಡಿ ಗಮನ ಸೆಳೆದರು.
ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನವನ್ನು ಲಿಯಾಕತ್ ಅಲಿ ಹಾಗೂ ಸಂತ ಮೈಕಲರ ಶಾಲೆಯ ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು, ಸರ್ವಧರ್ಮ ಗುರುಗಳಿಂದ ಭಗವದ್ಗೀತೆ(ಸಂತೋಷ್ ಭಟ್), ಬೈಬಲ್(ಫಾದರ್ ಜೈಸನ್ ಗೌಡರ್), ಕುರಾನ್(ಮೌಲಾನ ಇಸಾಕ್) ಸಂದೇಶಗಳನ್ನು ಬೋಧಿಸಿದರು.
ಸರ್ಕಾರಿ ಗೌರವಾರ್ಪಣೆ ಹಾಗೂ ಮೌನಾಚರಣೆಯ ನಂತರ ಮೆರವಣಿಗೆಯಲ್ಲಿ ಗಾಂಧೀಜಿ ಚಿತಾಭಸ್ಮವನ್ನು ಮತ್ತೆ ಜಿಲ್ಲಾ ಖಜಾನೆಯಲ್ಲಿಟ್ಟು ಭದ್ರಗೊಳಿಸಲಾಯಿತು.
ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್, ಸದಸ್ಯರಾದ ತೋರೇರ ಮುದ್ದಯ್ಯ, ಕೆ.ಟಿ.ಬೇಬಿ ಮ್ಯಾಥ್ಯು, ಅಂಬೆಕಲ್ಲು ನವೀನ್, ಎಸ್.ಪಿ.ವಾಸುದೇವ, ಎಂ.ಎನ್.ಸುಬ್ರಮಣಿ, ಜಿ.ಸಿ.ರಮೇಶ್, ಚಂದ್ರಶೇಖರ್, ರೇವತಿ ರಮೇಶ್, ಪ್ರಕಾಶ್ ಆಚಾರ್ಯ, ತೆನ್ನೀರ ಮೈನಾ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಸಹಾಯಕ ಖಜಾನಾಧಿಕಾರಿ ಶ್ಯಾಮ್ ಸುಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಮಣಜೂರು ಮಂಜುನಾಥ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಘಟಕರಾದ ದಮಯಂತಿ, ಸಹಾಯಕ ಗೈಡ್ ಆಯುಕ್ತರಾದ ಸುಲೋಚನಾ, ಸಂತ ಮೈಕಲರ ಶಾಲೆಯ ಶಿಕ್ಷಕಿಯರಾದ ಸಗಾಯ ಮೇರಿ, ರೀನಾ, ಸುನಿತಾ ಮತ್ತಿತರರು ಇದ್ದರು.
ಬಳಿಕ ಮಾತನಾಡಿದ ಸರ್ವೋದಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವುದು ಇಡೀ ರಾಷ್ಟ್ರದಲ್ಲೇ ವಿಶೇಷವಾಗಿದೆ ಎಂದರು.
ಗಾಂಧೀಜಿಯವರ ಚಿತಾ ಭಸ್ಮವನ್ನು ಕೊಳ್ಳಿಮಾಡ ಕರುಂಬಯ್ಯ ಅವರು ಕೊಡಗು ಜಿಲ್ಲೆಗೆ ತಂದಿದ್ದರು. ಅಂದಿನಿಂದ ನಗರದಲ್ಲಿ ಹುತಾತ್ಮರ ದಿನಾಚರಣೆಯನ್ನು ಜಿಲ್ಲಾಡಳಿತದ ಸಹಕಾರದಲ್ಲಿ ಸರ್ವೋದಯ ಸಮಿತಿ ವತಿಯಿಂದ ಹಮ್ಮಿಕೊಂಡು ಬರಲಾಗಿದೆ ಎಂದರು.
ಹಲವು ವರ್ಷಗಳ ಪ್ರಯತ್ನದಿಂದ ಗಾಂಧಿ ಮಂಟಪದಲ್ಲಿ ಚಿತಾಭಸ್ಮವನ್ನು ಇಟ್ಟು ರಾಜ್‌ಘಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವಲ್ಲಿ ಪ್ರಯತ್ನ ಮಾಡಲಾಗಿತ್ತು. ಆ ನಿಟ್ಟಿನಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ೫೦ ಲಕ್ಷ ರೂ.ವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದರು ಎಂದು ಟಿ.ಪಿ.ರಮೇಶ್ ಹೇಳಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ವಿಧಾನ ಪರಿಷತ್ ಅನುದಾನದಡಿ ೫ ಲಕ್ಷ ರೂ.ವನ್ನು ಪ್ರಕಟಿಸಿದ್ದಾರೆ. ಹಾಗೆಯೇ ಕೊಡಗು ಜಿಲ್ಲೆಯ ಶಾಸಕ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರು ಸಹ ಅನುದಾನ ನೀಡಲಿದ್ದಾರೆ. ಜೊತೆಗೆ ಸರ್ಕಾರದಿಂದಲೂ ಸಹ ಅನುದಾನ ಬಿಡುಗಡೆ ಮಾಡಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಟಿ.ಪಿ.ರಮೇಶ್ ಮಾಹಿತಿ ನೀಡಿದರು.