ಮಡಿಕೇರಿ ಮಾ.9 NEWS DESK : ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ಮುಂಜಾನೆಯಿಂದಲೇ ಗಣಪತಿ ಹೋಮ, ಈಶ್ವರನಿಗೆ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು. ಗ್ರಾಮದ 8 ದಿಕ್ಕುಗಳಿಂದ ಈಶ್ವರ ಆರಾಧನೆಯ ವಿಶೇಷ ಸೇವೆಯಾಗಿ ಹೊರೆ ಕಾಣಿಕೆ ಮೆರವಣಿಗೆ ಆಕರ್ಷಣಿಯವಾಗಿ ನಡೆಯಿತು.
ದೇವಾಲಯದ ಅರ್ಚಕರಾದ ಕೃಷ್ಣ ಭಟ್ ಮತ್ತು ಮಡಿಕೇರಿಯ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು.
ಮಹಿಳೆಯರು ಬರಿಗಾಲಿನಲ್ಲಿ ಹೊರೆಕಾಣಿಕೆಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಅಕ್ಕಿ, ದೀಪದ ಎಣ್ಣೆ, ಅಡುಣೆ ಎಣ್ಣೆ, ವಿವಿಧ ಬಗೆಯ ತರಕಾರಿ, ಹೂವು, ಹಣ್ಣುಗಳು ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಈಶ್ವರನಿಗೆ ಅರ್ಪಿಸಿದರು. ಚಂಡೆಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ನಡೆಯಿತು. ಶಿವರಾತ್ರಿ ಜಾಗರಣೆಯ ಅಂಗವಾಗಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ ಗಮನ ಸೆಳೆಯಿತು.









