ಮಡಿಕೇರಿ ಮಾ.9 NEWS DESK : ಮಹಾಶಿವರಾತ್ರಿ ಅಂಗವಾಗಿ ಚೆಟ್ಟಳ್ಳಿಯ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿ, ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಚೇರಿ ಮುಂದಿರುವ ಪಶುಪತಿನಾಥ, ಕಾವೇರಿ ಮಾತೆ, ಶ್ರೀ ಕೃಷ್ಣ, ಗೋಮಾತೆ ಹಾಗೂ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿರುವ ಶ್ರೀ ವಿನಾಯಕ, ವೀರಾಂಜನೇಯ ಹಾಗೂ ಮಹಾವಿಷ್ಣುವಿನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಚೆಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶ್ರೀ ವೀರಾಂಜನೇಯ ಯುವಕ ಸಂಘ, ಶ್ರೀ ಗೌರಿಗಣೇಶೋತ್ಸವ ಸಮಿತಿ, ಕೂಡ್ಲೂರು ಶ್ರೀ ವಿನಾಯಕ ದೇವಾಲಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಮಹಾಶಿವರಾತ್ರಿಯನ್ನು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಅಲಂಕಾರದೊಂದಿಗೆ ದೀಪಾರಾಧನೆ ಹಾಗೂ ವಿಶೇಷಪೂಜೆ ಸಲ್ಲಿಸಲಾಯಿತು. ನಂತರ ಮಹಾ ಮಂಗಳಾರತಿ ಪ್ರಸಾದ ವಿತರಣೆ ನೆರವೇರಿತು. ಮಕ್ಕಳು ಅಣತೆ ಬೆಳಗಿದರು.
ನಂತರ ಸಹಕಾರ ಸಂಘದ ಮುಖ್ಯ ಕಚೇರಿಯಿಂದ ಶ್ರೀನರೇಂದ್ರಮೋದಿ ಸಹಕಾರ ಭವನದವರೆಗೆ ಮೆರವಣಿಗೆ ನಡೆಯಿತು.
3 ವರ್ಷದಿಂದ 16 ವರ್ಷದೊಳಗಿನ 45ಕ್ಕೂ ಹೆಚ್ಚು ಮಕ್ಕಳು ಶಿವ, ಪಾರ್ವತಿ, ಶ್ರೀ ಕೃಷ್ಣ,ರಾಧೆಯ ಛದ್ಮವೇಷದಾರಿಗಳು ಎಲ್ಲರ ಗಮನ ಸೆಳೆದರು.
ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಾಧಿಕಾರಿ ಕೆ.ಎಸ್.ನಂದಿನಿ ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹೆಚ್.ಬಿ.ರಮೇಶ್, ಸಹಕಾರ ಸಂಘಗಳ ನಿವೃತ್ತ ಲೆಕ್ಕರಿಶೋಧಕ ಚಂದ್ರಶೇಖರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾಶಿರಾಮೇಶ್ವದಲ್ಲಿ ಪಶುಪತಿನಾಥ(ಶಿವ)ನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿ ಪ್ರತೀ ವರ್ಷ ಮಹಾಶಿವ ರಾತ್ರಿ ಉತ್ಸವವನ್ನು ಆಚರಿಸಲಾಗುತಿದೆಂದು ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದರು.
ಸಂಜೆ ಗೋಣಿಕೊಪ್ಪಲಿನ ಖ್ಯಾತ ಯುವ ಗಾಯಕ ಸಿ.ವಿ.ಅಶ್ವಿನ್ ಕುಮಾರ್ ಹಾಗೂ ದೀಪಿಕಾ ಆಚಾರ್ಯ, ಉಡುಪಿ ಹಾಡುಗಾರಿಕೆ, ಮಕ್ಕಳ ನೃತ್ಯ ಕಾರ್ಯಕ್ರಮ ನಡೆಯಲಿತು. ಛದ್ಮವೇಷದಾರಿ ಮಕ್ಕಳಿಗೆ ಪದಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರುಗಳು, ವಿವಿಧ ಸಂಘದ ಪದಾಧಿಕಾರಿಗಳು, ಸ್ಥಳಿಯರು ಹಾಜರಿದ್ದರು.






