ನಾಪೋಕ್ಲು ಮಾ.9 NEWS DESK : ಮಹಾಶಿವರಾತ್ರಿ ಪ್ರಯುಕ್ತ ನಾಪೋಕ್ಲುವಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಸಮೀಪದ ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ ದಿನ ವಾರ್ಷಿಕೋತ್ಸವ ನಡೆಯಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು.
ಮಧ್ಯಾಹ್ನ ಭಕ್ತರಿಂದ ತುಲಾಭಾರ ಸೇವೆಗಳನ್ನು ನಡೆಸಲಾಯಿತು. ಪೂಜೆಯ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಉತ್ಸವದ ಅಂಗವಾಗಿ ವಿಶೇಷವಾಗಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ನಡೆಯಿತು.
ಇಗ್ಗುತ್ತಪ್ಪ ದೇವರ ಉತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ನೃತ್ಯಬಲಿ ವೀಕ್ಷಿಸಿದರು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ತಂತ್ರಿಗಳಾಗಿ ಗೋಪಾಲಕೃಷ್ಣ ಕೆದಿಲಾಯ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚುರ ರವೀಂದ್ರ ಮಾತನಾಡಿ, ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಬೆಳಿಗ್ಗೆ ಆರು ಗಂಟೆಯಿಂದ ಆರಂಭಗೊಂಡು ದಿನಪೂರ್ತಿ ಕಾರ್ಯಕ್ರಮ ನಡೆದು ತುಲಾಭಾರ ಸೇವೆ ನಡೆಸಲಾಯಿತು.
ಈ ವರ್ಷ 21 ತುಲಾಭಾರ ಸೇವೆಗಳು ರುದ್ರಾಭಿಷೇಕ, ಮಹಾಪೂಜೆ, ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ಮಾಡಲಾಯಿತು. ಬಳಿಕ ದೇವರ ನೃತ್ಯ ಬಲಿಯನ್ನು ವೀಕ್ಷಿಸಿದರು ತುಲಾಭಾರ ಸೇವೆ ಹಾಗೂ ಹರಕೆ ಸಲ್ಲಿಸಿದವರಿಗೆ ತಕ್ಕ ಮುಖ್ಯಸ್ಥರು ರಾತ್ರಿ ಮಂತ್ರಾಕ್ಷತೆಯನ್ನು ವಿತರಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ ಎಂದರು.
ಈ ಸಂದರ್ಭ ಕಾರ್ಯದರ್ಶಿ ಅಪ್ಪಚ್ಚಿರ ಪೊನ್ನಪ್ಪ, ದೇವತಕ್ಕರಾದ ಮಚ್ಚುರ ತಮ್ಮಯ್ಯ, ನಾಡುತಕ್ಕರಾದ ಕೆ.ಪಿ.ಪೊನ್ನಮಯ್ಯ, ತೋಳಂಡ ದೇವಯ್ಯ, ಮೇಕ್ ಮಣಿಯಂಡ ಈರಪ್ಪ, ಬೊಟ್ಟೋಳಂಡ ಪುವಯ್ಯ, ಪೊನ್ನಣಿ , ಆನೆಯಡ ರಾಮಯ್ಯ , ತಾಪಂಡ ವರುಣ್, ಗ್ರಾಮದ ಹಿರಿಯರಾದ ಬೊಟ್ಟೋಳಂಡ ಬಿದ್ದಯ್ಯ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಪ್ರಮುಖರು ಹಾಗೂ ಊರ ಮತ್ತು ಪರವೂರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








