ಮಡಿಕೇರಿ ಮಾ.13 NEWS DESK : ಭಾರತದ ಕಾಫಿ ಬೆಳೆಗಾರರಿಗೆ ಆಶಾದಾಯಕವಾದ “ಫಾರ್ಮ್ 360” ಹೆಸರಿನ ಕಾರ್ಬನ್ ಮಾನಿಟರಿಂಗ್ ಫ್ಲಾಟ್ಫಾರ್ಮ್ ಅಂಡ್ ಅಸೆಸ್ಮೆಂಟ್ ಟೂಲ್ಸ್ ನ್ನು ಮಡಿಕೇರಿ ನಗರದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಕೊಡಗಿನ ಪ್ರತಿಷ್ಠಿತ ಸಾಯಿಲ್ ಹೆಲ್ತ್ ಅನಾಲೈಸಸ್ ಅಂಡ್ ಇಕೋಲಾಜಿಕಲ್ ಅಗ್ರಿಕಲ್ಚರಲ್ ಪ್ರಾಕ್ಟಿಸ್ ಸಂಸ್ಥೆಯಾದ ಐಮರ ಇಕೋಲಾಜಿಕಲ್ ಫಾರ್ಮಿಂಗ್ ಟೆಕ್ನಾಲಜೀಸ್ ವತಿಯಿಂದ ನಗರದ ಕ್ರಿಸ್ಟಲ್ ಕೋರ್ಟ್ನಲ್ಲಿ ಕಾಫಿ ಬೆಳೆಗಾರರ ಸಮ್ಮುಖದಲ್ಲಿ “ಫಾರ್ಮ್ 360” ನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು, ಭೂಮಿಯ ವಾತಾವರಣದಲ್ಲಿ ಇಂಗಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಭೂಮಿಯ ತಾಪಮಾನ ಅಪಾಯದ ಮಟ್ಟ ಮೀರುತ್ತಿದೆ ಎಂದರು.
“ಫಾರ್ಮ್ 360” ಭಾರತ ದೇಶದಲ್ಲಿ ಮಣ್ಣು ಆರೋಗ್ಯ ಪರೀಕ್ಷೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಕೃಷಿತಂತ್ರ, ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ನ ಅಂಗಸಂಸ್ಥೆ National Bureau of Soil Survey & Land Use Planning ಹಾಗೂ ಜಪಾನ್ ಮೂಲದ ವಿಶ್ವದ ಅಗ್ರ ಡಾಟಾ ಅನಾಲಿಸಿಸ್ ಸಂಸ್ಥೆಯಾದ ಎನ್ಟಿಟಿ ಡಾಟ ಇವರ ಸಂಯುಕ್ತ ಆಶ್ರಯದಲ್ಲಿ ಅಭಿವೃದ್ಧಿಪಡಿಸಿರುವುದಾಗಿದೆ. ಮಣ್ಣಿನಲ್ಲಿ ಸಂಗ್ರಹವಾದ ಸಾವಯವ ಇಂಗಾಲದ ಪ್ರಮಾಣವನ್ನು ದೃಢೀಕರಿಸಿ, ಅಂತರಾಷ್ಟ್ರೀಯ ಕಾರ್ಬನ್ ಟ್ರೇಡಿಂಗ್ ಸಂಸ್ಥೆಗಳೊಂದಿಗೆ ಕಾಫಿ ಬೆಳೆಗಾರರನ್ನು ನೇರವಾಗಿ ಸಂಪರ್ಕಿಸುವ ತಂತ್ರಜ್ಞಾನವಾಗಿದೆ.
::: ಆರ್ಥಿಕ ಲಾಭ :::
ಭಾರತದ ಕಾಫಿ ಬೆಳೆಗಾರರಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ಇಕೋಲಾಜಿಕಲ್ ಅಗ್ರಿಕಲ್ಚರಲ್ ಪ್ರಾಕ್ಟಿಸ್ ಮಾನದಂಡಗಳಡಿಯಲ್ಲಿ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವುದರಿಂದ, ಮಣ್ಣಿನಲ್ಲಿ ಶೇಖರಣೆಯಾದ ಇಂಗಾಲದ ಪ್ರಮಾಣಕ್ಕೆ 2 ಡಾಲರ್ನಿಂದ 200 ಡಾಲರ್ಗೂ ಮೀರಿ ಆರ್ಥಿಕ ಲಾಭಗಳಿಸಬಹುದಾಗಿದೆ.
ಮಣ್ಣಿನಲ್ಲಿ ಸಾವಯವದ ಇಂಗಾಲದ ಪ್ರಮಾಣ ಹೆಚ್ಚಾದಷ್ಟು, ಮಣ್ಣಿನ ಫಲವತ್ತತೆ ವೃದ್ಧಿಯಾಗಿ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಮಣ್ಣಿನಲ್ಲಿ ಪೌಷ್ಟಿಕಾಂಶಗಳ ಸಮತೋಲನ ಕಾಪಾಡಿಕೊಳ್ಳುವುದರಿಂದ, ರೋಗಬಾಧೆಯನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಬಹುದಾಗಿದೆ.
Decarbonizing Agriculture Certificate ಅನ್ನು ಬೆಳೆಗಾರರು ಪಡೆದುಕೊಳ್ಳುವುದರಿಂದ ಕಾಫಿ, ಕಾಳುಮೆಣಸು ಹಾಗೂ ಹಣ್ಣುಗಳನ್ನು ಉತ್ಕøಷ್ಟ ಬೆಲೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶವಿದ್ದು, ಇದರಿಂದ ಕಾಫಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದಾಗಿದೆ.
::: ಕೃಷಿ ಪದ್ಧತಿ ಪರಿಸರಕ್ಕೆ ಪೂರಕ :::
ಭೂಮಿಯ ವಾತಾವರಣದಲ್ಲಿ ಇಂಗಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಭೂಮಿಯ ತಾಪಮಾನ ಅಪಾಯದ ಮಟ್ಟ ಮೀರುತ್ತಿದೆ. ಇಂಗಾಲವನ್ನು ಮತ್ತೆ ಮಣ್ಣಿನಲ್ಲಿ ಸೇರಿಸುವ ಪ್ರಕ್ರಿಯೆಗೆ ಇಂಗಾಲ ಕಳೆ ಎನ್ನುತ್ತಾರೆ.
ಕೃಷಿ ಭೂಮಿಯಲ್ಲಿ ಪ್ರಸ್ತುತ ಇರುವ ಗಿಡ, ಮರಗಳ ಮೂಲಕ ಇಂಗಾಲ ಕಳೆ ಪ್ರಕ್ರಿಯೆಗೆ ಉತ್ತೇಜನ ನೀಡುವುದನ್ನು ಇಂಗಾಲ ಕಳೆ ಕೃಷಿ ವಿಧಾನ ಅಥವಾ ಪದ್ಧತಿ ಎನ್ನುತ್ತಾರೆ. ಪ್ರಸ್ತುತ ಮಣ್ಣಿನ ಫಲವತ್ತತೆಯ ಕೊರತೆಯಿಂದ ಈ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲವೆಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿರುತ್ತದೆ.
ಜಾಗತಿಕವಾಗಿ ಏರುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆಗೊಳಿಸದಿದ್ದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಪ್ರಸ್ತುತ ಇರುವ ನಮ್ಮ ಕೃಷಿಯನ್ನು ಕಳೆದುಕೊಳ್ಳುವ ಆತಂಕ ನಮ್ಮ ಮುಂದಿದೆ. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ಹಲವಾರು ಪ್ರಕ್ರಿಯೆಗಳಲ್ಲಿ ಇಂಗಾಲ ಕಳೆ ಕೃಷಿ ಪದ್ಧತಿ ಒಂದು ಪರಿಣಾಮಕಾರಿ ವಿಧಾನವಾಗಿದೆ ಎಂದು ಕೃಷಿತಂತ್ರ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೊಂಡಾಜಿ, ಮುಖ್ಯ ವ್ಯವಸ್ಥಾಪಕ ಹರೀಶ್ ಬೆಳ್ಳಿ, ವರಹ ಕಾರ್ಬನ್ ಟ್ರೇಡರ್ಸ್ ನ ಕಂಚನ್ ಯಾದವ್, ಕ್ಯಾಪ್ಸ್ ಬರ್ ಆಗ್ರಿ ಸೈನ್ಸ್ ನ ಗವಾಸ್ಕರ್ ಜಯಕಾಂತನ್, ರೈನ್ ಫಾರೆಸ್ಟ್ ಅಲೈಯನ್ಸ್ ನ ನೀಲಕಂಠ ಪನ್ಧಾರೆ ಮತ್ತಿತರರು ವಿವರಿಸಿದರು.
ಕಾಫಿ ಬೋರ್ಡ್ನ ನಿವೃತ್ತ ನಿರ್ದೇಶಕರು ಹಾಗೂ ಕೊಡಗು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ದಾಸ್ ಹಾಗೂ ಕಾರ್ಯಕ್ರಮದ ಆಯೋಜಕ ಐಮರ ಇಕೋಲಾಜಿಕಲ್ ಫಾಮಿರ್ಂಗ್ ಟೆಕ್ನಾಲೊಜೀಸ್ ಸಂಸ್ಥೆಯ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಮಾದೇಟಿರ ತಿಮ್ಮಯ್ಯ ಅವರುಗಳು ಕಾಫಿ ಬೆಳೆಗಾರರಿಗೆ ಮಣ್ಣಿನಲ್ಲಿ ಸಾವಯವದ ಇಂಗಾಲದ ವಿಷಯದ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಕಾಫಿ ಬೆಳೆಗಾರರು ಈ ರೀತಿಯ ಅತ್ಯಾಧುನಿಕ ತಂತ್ರಗಾರಿಕೆಯನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವಂತೆ ಕರೆ ನೀಡಿದರು. ಹೆಚ್ಚಿನ ಮಾಹಿತಿಗೆ ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿರುವ ಐಮರ ಇಕೋಲಾಜಿಕಲ್ ಫಾಮಿರ್ಂಗ್ ಟೆಕ್ನಾಲೊಜೀಸ್ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದೆಂದು ತಿಳಿಸಿದರು.