ಸೋಮವಾರಪೇಟೆ ಏ.27 NEWS DESK : ಅಂಕನಹಳ್ಳಿಯ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿಮಠದಲ್ಲಿ ಮೂರು ದಿವಸಗಳ ಕಾಲ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಏ.23 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ, ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಯವರಿಗೆ ಕಂಕಣ ಧಾರಣೆಯಾಗಿ, ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿಗೆ ಮಹಾಮಂಗಳಾರತಿಯಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಏ.24 ರಂದು ಬೆಳಿಗ್ಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ ನಡೆಯಿತು. ಸಂಜೆ ಶ್ರೀಸ್ವಾಮಿಯವರ “ಸೂರ್ಯ ಮಂಡಲೋತ್ಸವ” ನೆರವೇರಿತು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ದಾಸೋಹ ನಡೆಯಿತು.
ಏ.25 ರಂದು ಬೆಳಿಗ್ಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯ ಪ್ರೀತ್ಯರ್ಥ “ದುಗ್ಗಳ’ ಹಾಗೂ “ಅಗ್ನಿಕೊಂಡೋತ್ಸವ’ ಸೇವೆ ನೆರವೇರಿತು. ನಂತರ ಶ್ರೀ ಸ್ವಾಮಿಯವರ “ಅಡ್ಡಪಲ್ಲಕ್ಕಿ ಉತ್ಸವ” ನಡೆಯಿತು.
ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ “ಮುತ್ತೈದೆ ಸೇವೆ” ಯಾಗಿ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಮಡಿಲು ತುಂಬಿಸಿಕೊಂಡರು. ನಂತರ ದಾಸೋಹ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ಸ್ವಾಮಿಯವರ “ದೊಡ್ಡ ಚಂದ್ರಮಂಡಲೋತ್ಸವ” ನೆರವೇರಿತು.
ಸಂಜೆ “ಪ್ರಾಕಾರ ಪಲ್ಲಕ್ಕಿ ಉತ್ಸವ” ದೊಂದಿಗೆ ಶ್ರೀ ಸ್ವಾಮಿಯವರು ರಥೋತ್ಸವಕ್ಕೆ ಬಿಜಯಂಗೈದರು. ಮಂಗಳವಾದ್ಯ ಗೋಷ್ಠಿ, ವೀರಗಾಸೆ ನೃತ್ಯ ಹಾಗೂ ಮಹಿಳೆಯರ ಕುಂಭ ಕಳಶದೊಂದಿಗೆ ಶ್ರೀಸ್ವಾಮಿಯವರ “ಮಹಾ ರಥೋತ್ಸವ” ಆರಂಭವಾಯಿತು. ವಿದ್ಯುತ್ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ರಥೋತ್ಸವವದೊಂದಿಗೆ ಮೂರುದಿನಗಳ ಜಾತ್ರಾ ಮಹೋತ್ಸವ ಸಂಪನ್ನವಾಯಿತು.
ವಿವಿಧ ಪೂಜಾ ಕೈಂಕರ್ಯಗಳು ಹಾಗೂ ರಥೋತ್ಸವ ಸಂದರ್ಭ ತಪೋವನ ಕ್ಷೇತ್ರಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ, ಅರಮೇರಿ ಮಠಾಧೀಶ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕಿರಿಕೊಡ್ಲಿ ಮಠಧೀಶ ಸದಾಶಿವ ಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಮಠಾಧೀಶ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠಾಧೀಶ ಶಿವಲಿಂಗ ಸ್ವಾಮೀಜಿ, ಕಲ್ಲುಮಠಾಧೀಶ ಮಹಾಂತ ಸ್ವಾಮೀಜಿ, ಚಂಗಡಹಳ್ಳಿ ಮಠಾಧೀಶ ಬಸವ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠಾಧೀಶ ಮಲ್ಲೇಶ ಸ್ವಾಮೀಜಿ, ಮಠದ ಕಾರ್ಯಕ್ರಮ ಆಯೋಜಕ ಎಸ್.ಮಹೇಶ್ ಹಾಗೂ ಕ್ಷೇತ್ರದ ಸ್ವಯಂ ಸೇವಕರು ಹಾಜರಿದ್ದರು.