ಮಡಿಕೇರಿ ಏ.27 NEWS DESK : ನಾಪೋಕ್ಲುವಿನಲ್ಲಿ ಆಯೋಜಿತ ಕೊಡವ ಕುಟುಂಬಗಳ ನಡುವಣ ‘ಕುಂಡ್ಯೋಳಂಡ ಕಪ್ ಹಾಕಿ ಉತ್ಸವ’ದ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು, ಇಂದು ನಡೆದ ರೋಚಕ ಸೆಮಿ ಫೈನಲ್ ಪಂದ್ಯಗಳಲ್ಲಿ ಅರ್ಹ ಗೆಲುವು ಸಾಧಿಸಿದ ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳು ಏ.28ರಂದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ 3-1 ಗೋಲುಗಳ ಅಂತರದಿಂದ ಎದುರಾಳಿ ಕುಲ್ಲೇಟಿರ ತಂಡವನ್ನು ಮಣಿಸಿತು. ದ್ವಿತೀಯ ಸೆಮಿಫೈನಲ್‍ನಲ್ಲಿ ನೆಲ್ಲಮಕ್ಕಡ ತಂಡ 4-2 ಗೋಲುಗಳ ಅಂತರದಿಂದ ಕುಪ್ಪಂಡ(ಕೈಕೇರಿ) ತಂಡವನ್ನು ಪರಾಭವಗೊಳಿಸಿತು. ಪರಾಜಿತ ಕುಲ್ಲೇಟಿರ ಮತ್ತು ಕುಪ್ಪಂಡ ಕೈಕೇರಿ ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಲಿವೆ.
ಚೇಂದಂಡ–ಕುಲ್ಲೇಟಿರ- ದಿನದ ಮೊದಲ ಕುತೂಹಲಕಾರಿ ಸೆಮಿಫೈನಲ್‍ನಲ್ಲಿ ಚೇಂದಂಡ ತಂಡದ ಮೋಕ್ಷಿತ್ ಉತ್ತಪ್ಪ ಪಂದ್ಯದ ಆರಂಭಿಕ 4ನೇ ನಿಮಿಷವೆ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆಯನ್ನು ದೊರಕಿಸಿಕೊಟ್ಟರು. ¥ಂದ್ಯದ ದ್ವಿತೀಯ ಕ್ವಾರ್ಟರ್‍ನಲ್ಲಿ ಗೋಲುಗಳು ದಾಖಲಾಗಲಿಲ್ಲವಾದರು, ತೃತೀಯ ಕ್ವಾರ್ಟರ್‍ನ 34 ನೇ ನಿಮಿಷ ಚೇಂದಂಡ ನಿಖಿನ್ ತಿಮ್ಮಯ್ಯ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ 2-0 ಗೋಲಿನ ಸ್ಪಷ್ಟ ಮುನ್ನಡೆಯನ್ನು ದೊರಕಿಸಿಕೊಟ್ಟರು. ನಾಲ್ಕನೇ ಕ್ವಾರ್ಟರ್‍ನ 48 ನೇ ನಿಮಿಷ ಮಗದೊಮ್ಮೆ ಚೇಂದಂಡ ನಿಖಿನ್ ತಿಮ್ಮಯ್ಯ ಗೋಲು ಬಾರಿಸಿ ತಂಡಕ್ಕೆ ಗೆಲುವನ್ನು ಖಚಿತ ಪಡಿಸಿದರೆ, ಪಂದ್ಯದ ಕೊನೆಯ 59ನೇ ನಿಮಿಷ ಕುಲ್ಲೇಟಿರ ಶುಭಂ ಗೋಲೊಂದನ್ನು ಗಳಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಚೇಂದಂಡ ಗೆಲುವನ್ನು ಸಾಧಿಸಿ ಫೈನಲ್ ಪ್ರವೇಶಿಸಿತು.
ನೆಲ್ಲಮಕ್ಕಡ- ಕುಪ್ಪಂಡ(ಕೈಕೇರಿ)- ದ್ವಿತೀಯ ಸೆಮಿಫೈನಲ್ ಪಂದ್ಯದ ಮೊದಲ ಕ್ವಾರ್ಟರ್‍ನಲ್ಲಿ ನೆಲ್ಲಮಕ್ಕಡ ಮತ್ತು ಕುಪ್ಪಂಡ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತಾದರು ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯ ಕ್ವಾರ್ಟರ್‍ನ 20ನೇ ನಿಮಿಷ ನೆಲ್ಲಮಕ್ಕಡ ಪ್ರಧಾನ್ ಚಂಗಪ್ಪ ಮೊದಲ ಗೋಲನ್ನು ದಾಖಲಿಸಿದರು. 24ನೇ ನಿಮಿಷ ನೆಲ್ಲಮಕ್ಕಡ ಅಯ್ಯಪ್ಪ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ 2-0 ಗೋಲಿನ ಮುನ್ನಡೆ ದೊರಕಿಸಿಕೊಟ್ಟರು. ಇದಕ್ಕೆ ಪ್ರತಿಯಾಗಿ ಕುಪ್ಪಂಡ ಸೋಮಯ್ಯ 24 ನೇ ನಿಮಿಷ ಗೋಲನ್ನು ಗಳಿಸುವುದರೊಂದಿಗೆ ದ್ವಿತೀಯ ಕ್ವಾರ್ಟರ್ ಮುಕ್ತಾಯಕ್ಕೆ ನೆಲ್ಲಮಕ್ಕಡ 2-1 ಗೋಲಿನ ಮುನ್ನಡೆ ಪಡೆಯಿತು.
ತೃತೀಯ ಕ್ವಾರ್ಟರ್‍ನ 32ನೇ ನಿಮಿಷ ಕುಪ್ಪಂಡ ಸೋಮಯ್ಯ ಆಕರ್ಷಕ ಸಮಬಲದ ಗೋಲು ದಾಖಲಿಸುವುದರೊಂದಿಗೆ ಪಂದ್ಯ ರೋಚಕತೆಯನ್ನು ಪಡೆಯಿತು. ನೆಲ್ಲಮಕ್ಕಡ ಸೋಮಯ್ಯ 34 ನೇ ನಿಮಿಷ ಮತ್ತು ನಾಲ್ಕನೇ ಕ್ವಾರ್ಟರ್‍ನ 59 ನೇ ನಿಮಿಷ ನೆಲ್ಲಮಕ್ಕಡ ಅಯ್ಯಪ್ಪ ಮಿಂಚಿನ ಗೋಲು ದಾಖಲಿಸುವುದರೊಂದಿಗೆ ನೆಲ್ಲಮಕ್ಕಡ 4-2 ಗೋಲಿನ ಗೆಲುವನ್ನು ದಾಖಲಿಸಿ, ಅಂತಿಮ ಪಂದ್ಯದಲ್ಲಿ ಚೇಂದಂಡ ತಂಡವನ್ನು ಎದುರಿಸುವ ಅರ್ಹತೆ ಪಡೆದುಕೊಂಡಿತು.