ಮಡಿಕೇರಿ ಮೇ 7 NEWS DESK : ಮಡಿಕೇರಿ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಆಗುವ ಕೂಟುಹೊಳೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಶೇಖರಣೆ ಇಲ್ಲದೆ ಪ್ರಸ್ತುತ ಬತ್ತಿ ಹೋಗಿರುವುದರಿಂದ, ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಎಲ್ಲಾ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟಕರವಾಗಿರುವುದರಿಂದ ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು.
ಈ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ಮಿತವಾಗಿ ಬಳಸಿ, ಅನುಪಯುಕ್ತವಾಗಿ ಬಳಸದೆ (ಕಾರು, ಸ್ಕೂಟರ್ ಇತ್ಯಾದಿ ವಾಹನಗಳನ್ನು ಕುಡಿಯುವ ನೀರಿನಿಂದ ಶುಚಿಗೊಳಿಸದೇ ಅಲ್ಲದೆ ಮನೆಯ ಹೂ ತೋಟ ಮತ್ತು ಹೂ ಕುಂಡಗಳಿಗೆ ಉಪಯೋಗಿಸದೇ) ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಕೋರಿದೆ.
ಒಂದು ವೇಳೆ ಇದನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಅನುಪಯುಕ್ತವಾಗಿ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಮತ್ತೆ ಮರುಕಳಿಸಿದ್ದಲ್ಲಿ 1964ರ ಪೌರಸಭೆಗಳ ಅಧಿನಿಯಮದಂತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.