ನಾಪೋಕ್ಲು ಮೇ 8 NEWS DESK : ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ತಮ್ಮ ಜೀವನದ ಮೌಲ್ಯಗಳ ಬೆಳವಣಿಗೆಗೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ಸಮಾಜ ಸೇವಕ ಬೆಂಗಳೂರಿನ ಲಯನ್ ಡಾ. ಎಸ್.ನಾಗರಾಜ್ ರಾವ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂ ಎ.ಸಿ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಮತ್ತು ಬೆಳವಣಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದು ಸ್ಪರ್ಧಾತ್ಮಕ ಪ್ರಪಂಚವಾಗಿದ್ದು ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಕಂಪನಿಗಳಲ್ಲಿ ನಡೆಸುವ ಸಂದರ್ಶನಗಳ ಬಗ್ಗೆ ಅರಿವು ಇರಬೇಕು. ವಿದ್ಯಾರ್ಥಿಗಳು ಅದಕ್ಕಾಗಿ ತಯಾರಿ ನಡೆಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆದಷ್ಟು ಇಂಗ್ಲಿಷ್ ಭಾಷೆಯನ್ನು ಕಲಿತು ಎಲ್ಲರೊಂದಿಗೆ ಸಂದರ್ಶನಗಳಲ್ಲಿ ಪಾಲ್ಗೊಂಡು ಯಶಸ್ವಿ ಆಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಯಮಿ ಲಯನ್ ಎಂ.ಆರ್ ಶ್ರೀನಿವಾಸ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಎನ್.ಪಿ ಕಾವೇರಿ, ಎಲ್ಲಾ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಂಕುರ್ ಶಾಲೆಯ ಪ್ರಾಂಶುಪಾಲರಾದ ರತ್ನ ಚರ್ಮಣ್ಣ ಅವರಿಗೆ ಲಯನ್ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ಕಾಲೇಜು ಮಡಿಕೇರಿಯ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಲಯನ್ ಮೇರಿ ಚಿಟ್ಟಿಯಪ್ಪ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ದೇವಯ್ಯ ಪಾಲ್ಗೊಂಡಿದ್ದರು.
ಪ್ರಾಂಶುಪಾಲರಾದ ಡಾ. ಎನ್.ಪಿ.ಕಾವೇರಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಎ.ಕೆ.ಹರಿಣಿ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್.ಶಿವರಾಜ್ ಕುಮಾರ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.