ಮಡಿಕೇರಿ ಮೇ 8 NEWS DESK : ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಭೂ ಪರಿವರ್ತನೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೇ 10 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶುಕ್ರವಾರ ಬೆಳಗ್ಗೆ 10.30 ಗಂಟೆಯಿಂದ 11.30 ರವರೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ದೆಹಲಿಯ ಜಲ ನಿರ್ವಹಣಾ ಪ್ರಾಧಿಕಾರ, ಕರ್ನಾಟಕದ ಕಾವೇರಿ ನೀರಾವರಿ ನಿಯಂತ್ರಣ ಸಮಿತಿ, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಹಸಿರ ಪರಿಸರದಿಂದ ಕೂಡಿರುವ ಕಾಫಿ ತೋಟವನ್ನು ಭೂಪರಿವರ್ತಿಸುವ ಮೂಲಕ ಭೂಮಾಫಿಯಾ, ರೆಸಾರ್ಟ್ ದೊರೆಗಳು, ರಿಯಲ್ ಎಸ್ಟೇಟ್ ದಣಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೋರೇಟ್ ವಲಯಗಳಿಗೆ ವಿಲಾ, ಬೃಹತ್ ಬಂಗಲೆ ಹಾಗೂ ಟೌನ್ ಶಿಪ್ ಗಳನ್ನು ನಿರ್ಮಿಸಲು ಸರಕಾರ ಹಸಿರು ನಿಶಾನೆ ತೋರಿದಂತೆ ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ. ಕಾವೇರಿ ನದಿ ಪಾತ್ರದ ಒಂದು ದೊಡ್ಡ ಹಸಿರು ಹೊದಿಕೆಯ ಭೂಪ್ರದೇಶದ ಪರಿಸರವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಲಿದೆ. ದಕ್ಷಿಣ ಭಾರತದ ಜೀವನ ರೇಖೆಯಾದ ಕಾವೇರಿಯ ಜಲಮೂಲಗಳಿಗೆ ದಕ್ಕೆಯಾಗಲಿದೆ. ಭೂಪರಿವರ್ತಿತ ಪ್ರದೇಶಗಳ ಶಾಂತಿ, ಪ್ರಶಾಂತತೆ ಮತ್ತು ನೆಮ್ಮದಿ ಭಂಗವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರೀಯ ಕಾನೂನಿನಲ್ಲಿ ಪ್ರತಿಪಾದಿಸಲಾದ ಯುಎನ್ಒ ವಿಶ್ವರಾಷ್ಟ್ರ ಸಂಸ್ಥೆಯ ನಿಯಮಾನುಸಾರ ಸ್ಥಳೀಯ ಹಕ್ಕುಗಳನ್ನು ಶಾಸನಬದ್ಧವಾಗಿ ರಕ್ಷಿಸಬೇಕು ಮತ್ತು ನಮ್ಮ ಆಂತರಿಕ ರಾಜಕೀಯ-ಸ್ವಯಂ-ನಿರ್ಣಯ ಹಕ್ಕುಗಳನ್ನು ಗುರುತಿಸಲು ಸಂವಿಧಾನಾತ್ಮಕ ಪರಿಹಾರವಾಗಿ ಆರ್ಟಿಕಲ್ 32 ರ ಅಡಿಯಲ್ಲಿ ಸಾಂವಿಧಾನಿಕ ಕಾರ್ಯವಿಧಾನವನ್ನು ಪ್ರಾರಂಭಿಸಬೇಕು. ಸಂವಿಧಾನದ 244 ಮತ್ತು 371 ನೇ ವಿಧಿಯ ಪ್ರಕಾರ ಎಸ್ಟಿ ಟ್ಯಾಗ್ ಮತ್ತು ಸ್ವ-ಆಡಳಿತವು ಕೊಡವರನ್ನು ಹಾಗೂ ಕೊಡವ ಲ್ಯಾಂಡ್ ನ್ನು ರಕ್ಷಿಸುವ ಏಕೈಕ ಅಸ್ತ್ರವಾಗಿದೆ. ಆದ್ದರಿಂದ ಭೂಮಾಫಿಯಾಗಳಿಂದ ಕೊಡವ ಲ್ಯಾಂಡ್ ನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಸಿಎನ್ಸಿ ಶಾಂತಿಯುತ ಹೋರಾಟದ ಮಾರ್ಗ ಹಿಡಿದಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.