ಮಡಿಕೇರಿ ಮೇ 8 NEWS DESK : 1999ರಲ್ಲಿ ಸ್ಥಾಪನೆಯಾದ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಡೀ ವರ್ಷ ಕ್ರೀಡೆ, ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಜನಪರ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ನಡೆದು ಬಂದ ಹಾದಿ, ನೂತನ ಕುಶಾಲನಗರ ತಾಲೂಕಿನ ಸಮಗ್ರ ಮಾಹಿತಿ ಚಟುವಟಿಕೆಗಳು ದಾಖಲಿಸಲು ಸ್ಮರಣ ಸಂಚಿಕೆಯನ್ನು ಹೊರ ತರಲು ಸಂಘ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸಂಘದ ಸದಸ್ಯರಿಗೆ ಕ್ಷೇಮ ನಿಧಿ, ಕಚೇರಿ ಕಟ್ಟಡ ನಿರ್ಮಾಣ, ಸದಸ್ಯರಿಗೆ ನಿವೇಶನವನ್ನು ಪಡೆಯುವುದು ಈ ರೀತಿಯ ಚಟುವಟಿಕೆಗಳಿಗೆ ಸಾರ್ವಜನಿಕರು, ಉದ್ಯಮಿಗಳು, ರಾಜಕೀಯ ನೇತಾರರು ಹಾಗೂ ಸರ್ಕಾರದ ಸಹಕಾರದೊಂದಿಗೆ ಪ್ರೋತ್ಸಾಹದಾಯಕವಾಗಿ ನಿಧಿಯೊಂದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬೆಳ್ಳಿ ಮಹೋತ್ಸವದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರು ಸೇರಿದಂತೆ ಇದುವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೇ ಬೆಳ್ಳಿ ಹಬ್ಬದ ನೆನಪಿಗಾಗಿ ಹೊರ ತರಲಿರುವ ಸ್ಮರಣ ಸಂಚಿಕೆಯಲ್ಲಿ ವಿಶೇಷ ಲೇಖನಗಳು ಹಾಗೂ ಕುಶಾಲನಗರ ತಾಲೂಕಿನ ವ್ಯಾಪ್ತಿಯ ಸಮಗ್ರ ಮಾಹಿತಿಯನ್ನು ಪ್ರಕಟಿಸು ಸಲುವಾಗಿ ಪೂರ್ವ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಕ್ರೀಡಾ ಸಂಚಾಲಕ ಶಿವರಾಜ್ ಮಾತನಾಡಿ, ಬೆಳ್ಳಿ ಹಬ್ಬದ ಅಂಗವಾಗಿ ಕೊಡಗು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸಮಗ್ರ ಸದಸ್ಯರನ್ನು ಒಳಗೊಂಡು ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯು ಮೇ 19 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, 6 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ವಿಜೇತರಿಗೆ ನಗದು ಮತ್ತು ಆಕರ್ಷ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಮಂಜು ಸುವರ್ಣ, ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಕಾರ್ಯದರ್ಶಿ ನಾಗರಾಜಶೆಟ್ಟಿ, ಕ್ರೀಡಾ ಸಹ ಸಂಚಾಲಕ ವಿನೋದ್ ಉಪಸ್ಥಿತರಿದ್ದರು.