ಮಡಿಕೇರಿ ಮೇ 12 NEWS DESK : ಪ್ರತಿ ಮಳೆಗಾಲದಲ್ಲಿ ಪ್ರವಾಹದಿಂದ ದ್ವೀಪದಂತ್ತಾಗುತ್ತಿದ್ದ ಭಾಗಮಂಡಲದಲ್ಲಿ ಮೇಲುಸೇತುವೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಇದೀಗ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸಲಾಗಿದೆ.
ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿ ಅನುಷ್ಠಾನಗೊಂಡಿದ್ದು, ಒಟ್ಟು 28 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಾಣಗೊಂಡಿದೆೆ. ಈ ಮೇಲ್ಸೇತುವೆ ಭಾಗಮಂಡಲ ಪ್ರವೇಶ ದ್ವಾರದ ಮುಂದಿನಿಂದ ಪ್ರಾರಂಭವಾಗಿ ತಲಕಾವೇರಿ ರಸ್ತೆಯನ್ನು ಸಂಪರ್ಕಿಸುತ್ತದೆ. ಮಾತ್ರವಲ್ಲದೇ ಭಾಗಮಂಡಲ ಹೃದಯ ಭಾಗದಿಂದ ಮೇಲ್ಭಾಗವಾಗಿ ಮತ್ತೊಂದು ಸಂಪರ್ಕ ರಸ್ತೆ ನಾಪೋಕ್ಲು ಕಡೆಗೆ ತೆರಳುವ ಸೇತುವೆ ಬಳಿ ಕೊನೆಗೊಳ್ಳುತ್ತದೆ. ಒಟ್ಟು 880 ಮೀಟರ್ ಉದ್ದವಿದ್ದು, ಮಡಿಕೇರಿ-ಭಾಗಮಂಡಲ, ಭಾಗಮಂಡಲ-ತಲಕಾವೇರಿ, ಭಾಗಮಂಡಲ-ಅಯ್ಯಂಗೇರಿ ಎಂಬಂತೆ ಒಟ್ಟು 3 ಭಾಗಗಳಾಗಿ ವಿಂಗಡಿಸಲಾಗಿದೆ.
ಸೇತುವೆಯಲ್ಲಿ 60 ಟನ್ ಗೂ ಮೇಲ್ಪಟ್ಟ ಭಾರದ ವಾಹನಗಳು ಸಂಚರಿಸಬಹುದಾಗಿದ್ದು, 40 ಕಿ.ಮೀ ವೇಗದ ಮಿತಿ ನಿಗಧಿ ಮಾಡಲಾಗಿದೆ. ವಿದ್ಯುತ್ ದೀಪಗಳು, ಕೇಬಲ್, ಮಳೆ ನೀರು ಹರಿಯಲು ಪೈಪ್ ಗಳನ್ನು ಅಳವಡಿಸಲಾಗಿದ್ದು, ಸುಣ್ಣಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ.
ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯ ಗ್ರಾಮಸ್ಥರಿಗೆ ಈ ಸೇತುವೆ ಹೆಚ್ಚು ಸಹಕಾರಿಯಾಗಿದೆ. ಅಲ್ಲದೆ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಗೆ ಆಗಮಿಸುವ ಭಕ್ತರಿಗೂ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿ ಇಲ್ಲಿನ ಜನ ಹಾಗೂ ಭಕ್ತರು ಪ್ರವಾಹದ ಆತಂಕದಿAದ ಮುಕ್ತರಾಗಿ ಸಂಚರಿಸಬಹುದಾಗಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಮೇಲುಸೇತುವೆಯನ್ನು ಉದ್ಘಾಟಿಸಲು ಸರಕಾರ ಚಿಂತನೆ ನಡೆಸಿದೆ.
ಮಳೆಗಾಲದಲ್ಲಿ ಬ್ರಹ್ಮಗಿರಿ ಬೆಟ್ಟಸಾಲುಗಳ ತಲಕಾವೇರಿ, ಕೋರಂಗಾಲ, ಚೇರಂಗಾಲ, ಭಾಗಮಂಡಲ ವ್ಯಾಪ್ತಿಯಲ್ಲಿ ಅತಿಯಾಗಿ ಮಳೆಯಾಗುತ್ತದೆ. ಇದರ ಪರಿಣಾಮ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮದಲ್ಲಿ ಸಹಜವಾಗಿಯೇ ಪ್ರವಾಹ ಏರ್ಪಡುತ್ತದೆ. ಇದರಿಂದ ಮಡಿಕೇರಿ-ಭಾಗಮಂಡಲ, ತಲಕಾವೇರಿ-ಭಾಗಮಂಡಲ, ಅಯ್ಯಂಗೇರಿ-ನಾಪೋಕ್ಲು ರಸ್ತೆಗಳು ಸಂಪರ್ಕ ಕಳೆದುಕೊಳ್ಳುತ್ತವೆ. ರಸ್ತೆಗಳ ಮೇಲೆ ನೀರು ಹರಿಯುವ ಕಾರಣದಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಎಡೆಬಿಡದೆ ಮಳೆ ಸುರಿದಲ್ಲಿ ತ್ರಿವೇಣಿ ಸಂಗಮ ಸಹಿತ ಭಾಗಮಂಡಲ ಮಳೆ ಕಡಿಮೆಯಾಗುವವರೆಗೂ ದ್ವೀಪವಾಗಿ ಮಾರ್ಪಡುತ್ತದೆ. ಕಳೆದ ಹಲವು ದಶಕಗಳಿಂದ ಈ ಸಮಸ್ಯೆ ಜನರನ್ನು ಕಾಡುತ್ತಿದ್ದ ಹಿನ್ನೆಲೆ ಎಂಟು ವರ್ಷಗಳ ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಮೇಲುಸೇತುವೆ ಯೋಜನೆಯನ್ನು ರೂಪಿಸಿದರು. ಆದರೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಇಷ್ಟು ವರ್ಷಗಳೇ ಬೇಕಾಯಿತು.
ಪ್ರಸ್ತುತ ಮತ್ತೆ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಕಾನೂನು ಸಲಹೆಗಾರರಾಗಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಕಾಳಜಿಯಿಂದ ಕಾಮಗಾರಿ ಪೂರ್ಣಗೊಂಡು ಇದೀಗ ಮೇಲುಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
::: ಪ್ರವಾಹದಿಂದ ಭೀತಿ ಇಲ್ಲ :::
ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಅತ್ಯಂತ ಶ್ರಮವಹಿಸಿ ಪೂರ್ಣಗೊಳಿಸಲಾಗಿದೆ. ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಈಗಾಗಲೇ ಅನುವು ಮಾಡಿಕೊಡಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಈ ಮಳೆಗಾಲ ಪ್ರವಾಹ ಏರ್ಪಟ್ಟರು ಕೂಡ ಮಡಿಕೇರಿಯಿಂದ ಭಾಗಮಂಡಲ-ತಲಕಾವೇರಿ, ಭಾಗಮಂಡಲ-ನಾಪೋಕ್ಲು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮೇಲ್ಸೇತುವೆಯ ಎಲ್ಲಾ ಹಂತದ ಕಾಮಗಾರಿ ಪೂರ್ಣಗೊಂಡಿದೆ ಎಂದು ಮೇಲುಸೇತುವೆಯ ಯೋಜನಾ ನಿರ್ದೇಶಕ ಹರಿನಾರಾಯಣ ತಿಳಿಸಿದ್ದಾರೆ.