ಮಡಿಕೇರಿ ಮೇ 12 NEWS DESK : ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯ ವಿವಿಧೆಡೆ ನಸುಕಿನಲ್ಲಿ ಅಥವಾ ರಾತ್ರಿ ವೇಳೆ ಗಾಳಿ, ಸಿಡಿಲು ಸಹಿತ ಮಳೆಯಾಗುತ್ತಿದ್ದು, ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಕಾಲೂರು ಗ್ರಾಮದ ಬಾರಿಕೆ ಮೊಟ್ಟೆ ಎಂಬಲ್ಲಿ ಶನಿವಾರ ರಾತ್ರಿ ಜೋರಾಗಿ ಮಳೆ ಸುರಿದು ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿದೆ. ಸಿಡಿಲಬ್ಬರಕ್ಕೆ ಮನೆಯ ಒಂದು ಭಾಗ ಬಿದ್ದು ಹೋಗಿದೆ.
ಮನೆಯಲ್ಲಿದ್ದ ಲಿಂಗಮ್ಮ ಹಾಗೂ ಅವರ ಪುತ್ರ ಕಿರಣ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದು ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮನೆಯವರು ಹೇಳಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗಾಳಿಬೀಡು ಗ್ರಾಮ ಪಂಚಾಯ್ತಿ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಲಿಂಗಮ್ಮ ಅವರಿಗೆ ಧೈರ್ಯ ತುಂಬಿದರು. ಸರಕಾರದ ಮೂಲಕ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.