ಮಡಿಕೇರಿ ಮೇ 29 NEWS DESK : ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಪದವೀಧರರ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಶೇಖ್ ಬಾವ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರಭಾವದಿಂದ ಲೋಕಸಭೆ ಮತ್ತು ವಿಧಾನಸಭೆಗೆ ಚಿಂತನಾಶೀಲರು ಆಯ್ಕೆಯಾಗಿ ಬರುವ ಅವಕಾಶ ಕಡಿಮೆ ಎಂದು ಸಂವಿಧಾನಕರ್ತರು ಮೇಲ್ಮನೆಯ ವ್ಯವಸ್ಥೆಯನ್ನು ಮಾಡಿದರು. ಮೇಲ್ಮನೆಗೆ ಪರೋಕ್ಷ ಚುನಾವಣೆ ಇರುವುದರಿಂದ ಸಮರ್ಥರು ಹಾಗೂ ಯೋಗ್ಯರು ಆಯ್ಕೆಯಾಗುವ ಅಗತ್ಯವಿದೆ. ಆದರೆ ಅವಕಾಶವಾದಿಗಳಿಗೆ, ಪಕ್ಷಾಂತರಿಗಳಿಗೆ, ಅನರ್ಹರಿಗೂ ಅವಕಾಶ ಕಲ್ಪಿಸುವ ಮೂಲಕ ಸಂವಿಧಾನದ ಆಶಯಗಳ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ವಿಧಾನ ಪರಿಷತ್ತನ್ನು ತಮ್ಮ ರಾಜಕೀಯ ಮೇಲಾಟಕ್ಕೆ ಒಳಸಿಕೊಳ್ಳುತ್ತಿರುವುದು ವಿಷಾದಕರ ಎಂದರು.
ನಾನು ಉನ್ನತ ಶಿಕ್ಷಣವನ್ನು ಪಡೆದು ಕೊಲ್ಲಿ ದೇಶದ ಹೆಸರಾಂತ ಕಂಪನಿಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿ ಅಪಾರ ಅನುಭವಗಳಿಸಿದ್ದೇನೆ. ನನ್ನ ಸೇವಾವಧಿಯಲ್ಲಿ ಮತ್ತು ಸ್ವದೇಶಕ್ಕೆ ಮರಳಿದ ನಂತರವೂ ಹಲವು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಅನುಭವ, ಸೇವಾ ಶಕ್ತಿ, ಸಾಮಥ್ರ್ಯವನ್ನು ನಾಡಸೇವೆಗೆ ಬಳಸಿಕೊಳ್ಳುವ ಉದ್ದೇಶದಿಂದ 2024ರ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ಸರ್ಕಾರಿ ನೇರ ನೇಮಕಾತಿ ಮತ್ತು ಗುತ್ತಿಗೆ ಆಧಾರಿತ ನೇಮಕಾತಿಗಳಲ್ಲೂ ಕಡ್ಡಾಯವಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು, ಸ್ವಉದ್ಯೋಗ ಮಾಡುವ ಪದವೀಧರರಿಗೆ ಬಡ್ಡಿ ರಹಿತವಾಗಿ ಅಗತ್ಯ ಮೂಲಧನವನ್ನು ದೊರಕಿಸಿಕೊಡುವುದು, ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೂ ಅರ್ಹ ವೇತನ ನೀಡುವುದು, ಉದ್ಯೋಗ ಮೇಳ ಏರ್ಪಡಿಸಿ ಅರ್ಹರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು, ಪದವೀಧರರಿಗೆ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸುವುದು, ಕಲಿಕೆಯೊಂದಿಗೆ ಸಂಪಾದಿಸಿ ಎಂಬ ಯೋಜನೆಯನ್ನು ಕ್ರಮಬದ್ಧವಾಗಿ ಕಾರ್ಯಗತಗೊಳಿಸಿ ಯುವಕರನ್ನು ದುಶ್ಚಟಗಳಿಂದ ದೂರವಿರಿಸುವುದು, ಗುತ್ತಿಗೆ ಆಧಾರದ ಮೇಲೆ ನಿಯೋಜಿತರಾಗಿರುವ ಗೌರವ ಶಿಕ್ಷಕರನ್ನು ಖಾಯಂಗೊಳಿಸುವುದು, ತುಳು, ಕೊಡವ ಮತ್ತು ಬ್ಯಾರಿ ಭಾಷೆಗಳ ಮಾನ್ಯತೆಗಾಗಿ ಧ್ವನಿ ಎತ್ತುವುದು, ಪದವೀಧರರ ಹಿತಾಸಕ್ತಿಯ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಮೂಲ ಉದ್ದೇಶವಾಗಿದೆ ಎಂದರು.
ನೈರುತ್ಯ ಪದವೀಧರರ ಕ್ಷೇತ್ರದ ಮತದಾರರು ಜೂ.3 ರಂದು ನಡೆಯುವ ಚುನಾವಣೆಯಲ್ಲಿ ನನಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಡಾ.ಶೇಖ್ ಬಾವ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‍ನ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಎಸ್.ಕರೀಂ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹಂಝ ಹಾಜಿ, ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ರಫೀಕ್ ಹಾಗೂ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ನೌಷದ್ ಮಲರ್ ಉಪಸ್ಥಿತರಿದ್ದರು.