ಮಡಿಕೇರಿ ಜೂ.25 NEWS DESK : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 22 ಬಾರಿ ಏರಿಕೆ ಮಾಡಿದೆ. ಆಗ ಬಿಜೆಪಿಗೆ ಇಲ್ಲದ ಜನಪರ ಕಾಳಜಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದಾಗ ಹೇಗೆ ಬಂತು ಎಂದು ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಲೆ ಏರಿಕೆಯ ನೆಪ ಮಾಡಿಕೊಂಡು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಖಂಡನೀಯ ಮತ್ತು ಇದು ಬಿಜೆಪಿಯ ಕೀಳು ಮಟ್ಟದ ವರ್ತನೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಜನಸಾಮಾನ್ಯರ ಸಂಕಷ್ಟವನ್ನು ಅರಿಯದ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಬಂದಿದ್ದು, ನೂರರ ಗಡಿ ದಾಟಿದೆ. ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ 450 ರೂ. ಇದ್ದ ಅಡುಗೆ ಅನಿಲದ ಬೆಲೆ ಈಗ ಸಾವಿರ ಮೀರಿದೆ. ಈಗ ಸಬ್ಸಿಡಿಯನ್ನು ಕೂಡ ನಿಲ್ಲಿಸಲಾಗಿದೆ.
ರೈತರ ಖಾತೆಗೆ 2 ಸಾವಿರ ರೂ. ಹಾಕುತ್ತಿರುವ ಕೇಂದ್ರ ಸರ್ಕಾರ ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ಕೃಷಿ ಕ್ಷೇತ್ರದ ವಸ್ತುಗಳ ಬೆಲೆಯನ್ನು ದುಬಾರಿಗೊಳಿಸಿ ಒಂದು ಕಡೆ ನೀಡಿದ್ದನ್ನು ಮತ್ತೊಂದು ಕಡೆಯಿಂದ ಕಸಿದುಕೊಳ್ಳುತ್ತಿದೆ. ಪ್ರಜೆಗಳಿಗೆ ಹೆಚ್ಚು ಹೊರೆಯಾದ ಶೇ.18ರಷ್ಟು ಜಿಎಸ್‍ಟಿ ಸಂಗ್ರಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಜನಸಾಮಾನ್ಯರು ಹಾಗೂ ರೈತರ ಮೇಲೆ ಯಾಕೆ ಬಿಜೆಪಿಗೆ ಕರುಣೆ ಬರಲಿಲ್ಲ ಎಂದು ತೀರ್ಥಪ್ರಸಾದ್ ಪ್ರಶ್ನಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಶಾಸಕರಾಗಿದ್ದವರು ಈಗ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಜನರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿಗೆ ಬೇರೆ ಮಾರ್ಗವಿಲ್ಲದೆ ವಿನಾಕಾರಣ ಪ್ರತಿಭಟನೆಗಳನ್ನು ನಡೆಸಿ ಪ್ರತಿಕೃತಿ ದಹಿಸುವಂತಹ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಈ ಪ್ರತಿಭಟನೆಗಳು ಜನಪರ ಕಾಳಜಿಯಾಗಿರದೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಮತ್ತು ಮೊಸಳೆ ಕಣ್ಣೀರಿನ ಹೋರಾಟವಾಗಿದೆ ಎಂದು ಟೀಕಿಸಿದ್ದಾರೆ.
ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಜಿಲ್ಲೆಯ ಜನಪ್ರಿಯ ಶಾಸಕರುಗಳೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.