ಸೋಮವಾರಪೇಟೆ ಜೂ.25 NEWS DESK : ಆಧುನಿಕತೆ ಮತ್ತು ಆವಿಷ್ಕಾರಗಳ ಎದುರು ಪ್ರಾಚೀನತೆಯ ನೆನಪುಗಳು ಕಳೆದುಹೋಗಬಾರದು. ಆಧುನಿಕತೆಯೂಬೇಕು, ಪ್ರಾಚೀನತೆಯೂ ಉಳಿಯಬೇಕು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದರು. ನಂಜಮ್ಮ ಸಮುದಾಯ ಭವನದಲ್ಲಿ ನಡೆದ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮ ಸಮಾಜ ನಿರ್ಮಾಣದಲ್ಲಿ ಎಲ್ಲರ ಕೊಡುಗೆ ಅಗತ್ಯವಾಗಿದೆ. ಪುರಾತನ ಪದ್ದತಿಗಳು ಹಾಗು ಪ್ರಗತಿಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಮುಖ್ಯ ಅತಿಥಿಯಾಗಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಣ್ಣ ಸಮುದಾಯಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಮೂಲಕ ಹಾಗು ವೈಯುಕ್ತಿಕವಾಗಿಯೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಮತ್ತೋರ್ವ ಅತಿಥಿ ಸಾಹಿತಿ ನರಹಳ್ಳಿ ಡಾ. ಬಾಲಸುಬ್ರಹ್ಮಣ್ಯ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಇಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ಇಂದ್ರಿಯಗಳಿಗೆ ಚೈತನ್ಯ ತುಂಬುತ್ತವೆ. ಸಾತ್ವಿಕ ಶಕ್ತಿ ನಿಷ್ಕಿçಯವಾದರೆ ತಾಮಸ ಶಕ್ತಿಗಳು ವಿಜೃಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಒಳ್ಳೆತನ ಇರುವವರು ಶಕ್ತಿವಂತರಾಗಿಯೂ ಇರಬೇಕಾದ ಅನಿವಾರ್ಯತೆಯಿದೆ ಎಂದರು. ವೇದಿಕೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಪತ್ರಿಕೋದ್ಯಮಿ ಜಿ.ರಾಜೇಂದ್ರ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಪ್ರಮುಖರಾದ ವಿನೋದ್ ಶಿವಪ್ಪ, ಎಚ್.ಟಿ.ಅನಿಲ್, ಉದಯ್ ಈಶ್ವರನ್, ದೇವಿ ಬಳಗದ ಅಧ್ಯಕ್ಷೆ ರತಿ ನಂದಕುಮಾರ್, ಹಿರಿಯ ಕಲಾವಿದೆ ಚಿತ್ರಕಲಾ ಜೋಷಿ ಸೇರಿದಂತೆ ಇತರರು ಇದ್ದರು.